ADVERTISEMENT

ಚಳವಳಿ ಕೆಡಿಸಲು ಸಮಾಜಘಾತುಕರ ಪಿತೂರಿ: ರೈತ ಸಂಘಟನೆಗಳ ಆಕ್ರೋಶ

ಪ್ರತಿಭಟನೆ ನಿಲ್ಲದು, ಸಂಚು ಮಾಡಿದವರ ಪತ್ತೆ ಮಾಡುತ್ತೇವೆ: ರೈತ ಸಂಘಟನೆಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 19:49 IST
Last Updated 26 ಜನವರಿ 2021, 19:49 IST
ಬೆಂಗಳೂರಿನಲ್ಲಿ ಮಂಗಳವಾರ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳ ನೂರಾರು ಸದಸ್ಯರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು –-ಪ್ರಜಾವಾಣಿ ಚಿತ್ರ/ ರಂಜು ಪಿ .(ಎಡಚಿತ್ರ) ಗಾಜಿಪುರ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಕಿತ್ತು ಮುನ್ನುಗ್ಗಿದ್ದ ರೈತರು -–ಪಿಟಿಐ ಚಿತ್ರ
ಬೆಂಗಳೂರಿನಲ್ಲಿ ಮಂಗಳವಾರ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳ ನೂರಾರು ಸದಸ್ಯರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು –-ಪ್ರಜಾವಾಣಿ ಚಿತ್ರ/ ರಂಜು ಪಿ .(ಎಡಚಿತ್ರ) ಗಾಜಿಪುರ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಕಿತ್ತು ಮುನ್ನುಗ್ಗಿದ್ದ ರೈತರು -–ಪಿಟಿಐ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಒಂದಿಡೀ ದಿನದ ಅಸ್ತವ್ಯಸ್ತ ಸ್ಥಿತಿಯ ಬಳಿಕ, ರೈತ ಸಂಘಟನೆಗಳು ‘ಕಿಸಾನ್‌ ಗಣತಂತ್ರ ಪರೇಡ್‌’ ಅನ್ನು ರದ್ದು ಮಾಡಿದ್ದಾಗಿ ಘೋಷಿಸಿವೆ. ತಮ್ಮ ಶಾಂತಿಯುತ ಪ್ರತಿಭಟನೆಯನ್ನು ಹಾಳುಗೆಡವುವ ಉದ್ದೇಶದಿಂದ ‘ಸಮಾಜಘಾತುಕ ಶಕ್ತಿ’ಗಳು ಪಿತೂರಿ ನಡೆಸಿವೆ ಎಂದು ಆರೋಪಿಸಿವೆ.

ಹಿಂಸಾಚಾರವು ರೈತರ ಪ್ರತಿಭಟನೆಗೆ ಭಾರಿ ಹಾನಿ ಮಾಡಿದ್ದರಿಂದ ಟ್ರ್ಯಾಕ್ಟರ್‌ ರ್‍ಯಾಲಿಯನ್ನು ರದ್ದುಪಡಿಸುವ ನಿರ್ಧಾರವನ್ನು ಸಂಯುಕ್ತ ಕಿಸಾನ್‌ ಮೋರ್ಚಾ ಕೈಗೊಂಡಿತು. ಎಲ್ಲ ರೈತರು ಪ್ರತಿಭಟನಾ ಸ್ಥಳಕ್ಕೆ ಮರಳುವಂತೆ ಸೂಚಿಸಿತು. ಆದರೆ, ಪ್ರತಿಭಟನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅಖಿಲ ಭಾರತ ಕಿಸಾನ್‌ ಸಭಾದ ಕಾರ್ಯದರ್ಶಿ ಹನ್ನನ್‌ ಮೊಲ್ಲಾ ಸ್ಪಷ್ಟಪಡಿಸಿದ್ದಾರೆ.

ಟ್ರ್ಯಾಕ್ಟರ್‌ ರ್‍ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಿಂದ ಚಳವಳಿಗೆ ಹಿನ್ನಡೆ ಆಗಿದೆ. ಚಳವಳಿಯನ್ನು ದಮನ ಮಾಡಲು ಸರ್ಕಾರಕ್ಕೆ ಇದು ಅವಕಾಶ ಕೊಡಬಹುದು ಎಂದು ಅವರು ಹೇಳಿದ್ದಾರೆ.

ADVERTISEMENT

‘ನಾವು ಪ್ರತಿಭಟನೆ ಮುಂದುವರಿಸುತ್ತೇವೆ. ಅದು ಶಾಂತಿಯುತವಾಗಿಯೇ ಇರಲಿದೆ. ಮುಂದಿನ ಕ್ರಮಗಳೇನು ಎಂಬುದನ್ನು ಶೀಘ್ರವೇ ನಿರ್ಧರಿಸುತ್ತೇವೆ.
ರೈತರ ಹೋರಾಟಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ ಪಿತೂರಿ ನಡೆದಿದೆ ಎಂದು ಗುಮಾನಿ ರೈತ ಸಂಘಟನೆಗಳಿಗೆ ಮೊದಲೇ ಬಂದಿತ್ತು’ ಎಂದು ಅವರು ತಿಳಿಸಿದ್ದಾರೆ.

‘ಏನೇನು ನಡೆದಿದೆ ಎಂಬುದನ್ನು ಒಂದೆರಡು ದಿನಗಳಲ್ಲಿ ವಿಶ್ಲೇಷಿಸಿ, ಪಿತೂರಿಯನ್ನು ಬಯಲಿಗೆ ಎಳೆಯುತ್ತೇವೆ. ಇಂತಹ ಘಟನೆಯು ಚಳವಳಿಯನ್ನು ನಾಶ ಮಾಡಬಹುದು. ಹಾಗಾಗಿ ಯಾರು ಪಿತೂರಿ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಲೇಬೇಕು’ ಎಂದು ಅವರು ಹೇಳಿದ್ದಾರೆ.

ಪ್ರತಿಭಟನಕಾರರು ಪೊಲೀಸರ ಜತೆಗೆ ಸಂಘರ್ಷಕ್ಕೆ ಇಳಿದ ಸಂದರ್ಭದಲ್ಲಿ ರೈತ ಸಂಘಟನೆಗಳ ಮುಖಂಡರು ಅಲ್ಲಿ ಇರಲಿಲ್ಲ. ಸ್ವರಾಜ್‌ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್‌ ಅವರು ಮಂಗಳವಾರ ಮಧ್ಯಾಹ್ನ 2.30ರ ಹೊತ್ತಿಗೆ ವಿಡಿಯೊ ಸಂದೇಶವನ್ನು ಪ್ರಕಟಿಸಿ, ಶಾಂತಿ ಕಾಯ್ದುಕೊಳ್ಳಲು ಮನವಿ ಮಾಡಿದರು. ನಿಗದಿತ ಮಾರ್ಗದಲ್ಲಿಯೇ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಲು ಕೋರಿದರು. ಅವರು ರಾಜಸ್ಥಾನ–ಹರಿಯಾಣ ಗಡಿಯ ಶಾಜಹಾನ್‌ಪುರದಿಂದ ಈ ಮನವಿ ಕಳುಹಿಸಿದ್ದರು. ಆದರೆ, ಯಾದವ್‌ ಅವರ ಮನವಿ ಬರುವ ಹೊತ್ತಿಗೆ ಸಂಘರ್ಷ ತೀವ್ರಗೊಂಡಿತ್ತು.

ಹಿಂಸಾಚಾರ ನಡೆಸಿದ್ದು ಯಾರು?

ರೈತರ ಟ್ರ್ಯಾಕ್ಟರ್ ಪರೇಡ್‌ನ ವೇಳೆ ಹಿಂಸಾಚಾರ ನಡೆಸಿದ್ದು ಯಾರು ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಸಾವಿರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಶ್ನೆಯನ್ನು ಕೇಳಿದ್ದಾರೆ.

ರೈತರೇ ಹಿಂಸಾಚಾರ ನಡೆಸಿದ್ದಾರೆ. ಪೊಲೀಸರು ನೀಡಿದ್ದ ಅನುಮತಿಯನ್ನು ಉಲ್ಲಂಘಿಸಿದ್ದಾರೆ. ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪಕ್ಷಗಳೂ ಟ್ರ್ಯಾಕ್ಟರ್‌ ಪರೇಡ್ ಶಾಂತಿಯುತವಾಗಿ ನಡೆಯಬೇಕಿತ್ತು ಎಂದು ಹೇಳಿವೆ.

ರೈತರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಒಂದೂ ಹಿಂಸಾಚಾರ ನಡೆದಿರಲಿಲ್ಲ. ಇಂದು ಹೊರಗಿನವರು ರೈತರ ಮಧ್ಯೆ ಸೇರಿಕೊಂಡು ಹಿಂಸಾಚಾರ ನಡೆಸಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ‘ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಪಿಯೇ ಹೀಗೆ ಮಾಡಿಸಿದೆ’ ಎಂದು ಬಿವಾಸ್ ಪ್ರಸಾದ್ ಸಿಂಹಾ ಎಂಬುವವರು ಟ್ವೀಟ್ ಮಾಡಿದ್ದಾರೆ. ಇವರ ಟ್ವೀಟ್ 2,000ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ.

ರೈತರ ಕೆಂಪುಕೋಟೆಯ ಮುತ್ತಿಗೆಯನ್ನು ಹಲವರು, ಅಮೆರಿಕದ ಕ್ಯಾಪಿಟಲ್‌ ಹಿಲ್‌ನಲ್ಲಿನ ಹಿಂಸಾಚಾರಕ್ಕೆ ಹೋಲಿಸಿದ್ದಾರೆ. ‘ಇದು ಭಾರತದ ಕ್ಯಾಪಿಟಲ್ ಹಿಲ್ ಘರ್ಷಣೆ’ ಎಂದು ಸುದಾನ್‌ ಎಂಬುವವರು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕ್ಯಾಪಿಟಲ್ ಹಿಲ್‌ಗೆ ಪ್ರತಿಭಟನಕಾರರು ಮುತ್ತಿಗೆ ಹಾಕಿದಂತೆಯೇ, ರೈತರು ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲಿ ಬೇರೆ ಧ್ವಜ ಹಾರಿಸಿದಂತೆ, ಇಲ್ಲಿಯೂ ಬೇರೆ ಧ್ವಜ ಹಾರಿಸಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇವರು ರೈತರಲ್ಲ, ಉಗ್ರರು. ಕಸಬ್‌ಗೂ ಈ ಗೂಂಡಾಗಳಿಗೂ ವ್ಯತ್ಯಾಸವಿಲ್ಲ’
ಎಂದು ಅಂಕಿತಾ ಸಿಂಹ ಎಂಬುವವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ. ಈ ಟ್ವೀಟ್‌ಗಳ ಜತೆ ‘#ಕಿಸಾನ್‌ ನಹೀ ಗೂಂಡೇ’ ಎಂಬ ಹ್ಯಾಶ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ವಿರೋಧ ಪಕ್ಷಗಳಲ್ಲಿ ತಳಮಳ

ರೈತರ ಪ್ರತಿಭಟನೆಯ ಸಂದರ್ಭದಲ್ಲಿ ನಿರ್ಮಾಣವಾದ ಅವ್ಯವಸ್ಥೆ, ಹಿಂಸಾಚಾರ, ಕೆಂಪು ಕೋಟೆಯ ಮೇಲೆ ರೈತರು ಧ್ವಜ ಹಾರಿಸಿದ್ದೇ ಮುಂತಾದ ಘಟನೆಗಳು ಮತ್ತು ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳು ರಾಜಕೀಯ ಪಕ್ಷಗಳನ್ನು ಗೊಂದಲಕ್ಕೆ ತಳ್ಳಿವೆ. ಎಲ್ಲಾ ಪಕ್ಷಗಳು ಈ ಘಟನೆಯಿಂದ ಅಂತರ ಕಾಯ್ದುಕೊಳ್ಳುತ್ತಿವೆ.

ಟ್ರ್ಯಾಕ್ಟರ್‌ ರ್‍ಯಾಲಿಯ ಸಂದರ್ಭದಲ್ಲಿ ನಡೆದ ಗಲಭೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದರೂ, ರೈತರ ಗುಂಪೊಂದು ಕೆಂಪು
ಕೋಟೆಯೊಳಗೆ ಪ್ರವೇಶಿಸಿದ ಘಟನೆಗೆ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ಆರಂಭದಿಂದಲೇ ರೈತರ ಹೋರಾಟವನ್ನು ಬೆಂಬಲಿಸಿದ್ದರೂ, ಆ ಪಕ್ಷದ ಮುಖಂಡರಾದ ಶಶಿ ತರೂರ್‌ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ‘ರೈತರು ಈವರೆಗೆ ಸಂಪಾದಿಸಿದ ಗೌರವವನ್ನು ಈ ಘಟನೆ ಹಾಳು ಮಾಡಿದೆ’ ಎಂಬ ಅಭಿಪ್ರಾಯವನ್ನು ಈ ನಾಯಕರು ವ್ಯಕ್ತಪಡಿಸಿದ್ದಾರೆ.

ಹೋರಾಟದ ಮುಂಚೂಣಿಯಲ್ಲೇ ಕಾಣಿಸಿಕೊಂಡಿರುವ, ಸ್ವರಾಜ್‌ ಪಾರ್ಟಿಯ ಮುಖಂಡ ಯೋಗೇಂದ್ರ ಯಾದವ್‌ ಅವರು, ‘ಮಂಗಳವಾರದ ಘಟನೆಯಿಂದ ಶಾಂತಿ ಕದಡಿದೆ’ ಎಂದಿದ್ದಾರೆ.

‘ವಾಸ್ತವದಲ್ಲಿ ಆಗಿದ್ದೇನು ಎಂಬುದು ನನಗೆ ಗೊತ್ತಿಲ್ಲ. ಆದರೆ ಈ ಘಟನೆ ಅತ್ಯಂತ ನಾಚಿಕೆಗೇಡಿನದ್ದು ಮತ್ತು ಖಂಡನೀಯ. ಈ ಘಟನೆಯು ಈವರೆಗಿನ ಚಳವಳಿಯನ್ನು ಪ್ರತಿನಿಧಿಸುವುದಿಲ್ಲ’ ಎಂದು ಯಾದವ್‌ ಹೇಳಿದ್ದಾರೆ.

ಪ್ರತಿಭಟನೆಯನ್ನು ಬೆಂಬಲಿಸುತ್ತಿರುವ ವಿರೋಧಪಕ್ಷಗಳನ್ನು ಕಟ್ಟಿಹಾಕಲು ಬೇಕಾಗುವಷ್ಟು ಶಸ್ತ್ರಾಸ್ತ್ರಗಳನ್ನು ಕೆಂಪುಕೋಟೆಗೆ ರೈತರ ಮುತ್ತಿಗೆ ಘಟನೆಯು ಬಿಜೆಪಿ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒದಗಿಸಲಿದೆ ಎಂಬುದು ಎಲ್ಲಾ ಪಕ್ಷಗಳ ಮುಖಂಡರಿಗೆ ಸ್ಪಷ್ಟವಾಗಿದೆ.

ಘಟನೆಯ ನಂತರ ಪ್ರತಿಕ್ರಿಯೆ ನೀಡಿರುವ ಎಎಪಿ, ‘ಇದು ಚಳವಳಿಯನ್ನು ದುರ್ಬಲಗೊಳಿಸಿದೆ’ ಎಂದಿರುವುದಲ್ಲದೆ ಇದರ ಹೊಣೆಯನ್ನು ಕೇಂದ್ರ ಸರ್ಕಾರದ ಮೇಲೆ ಹೊರಿಸಿದೆ. ‘ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಕೇಂದ್ರದ ಜವಾಬ್ದಾರಿಯಾಗಿತ್ತು. ಸರ್ಕಾರ ಇದರಲ್ಲಿ ವಿಫಲವಾಗಿದೆ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರೈತರು ಹಾರಿಸಿದ್ದು ಖಾಲಿಸ್ತಾನದ ಧ್ವಜವಲ್ಲ

ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ರೈತರು, ಕೋಟೆಯ ಮೇಲೆ ಹಾರುತ್ತಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದರು. ಆ ಜಾಗದಲ್ಲಿ ಬೇರೊಂದು ಧ್ವಜವನ್ನು ಹಾರಿಸಿದರು. ಹಳದಿ-ನೀಲಿ ಬಣ್ಣದ, ತ್ರಿಕೋನಾಕೃತಿಯ ಈ ಧ್ವಜವನ್ನು ಮೂವರು ಯುವಕರು ಕೆಂಪು ಕೋಟೆಯ ಗುಮ್ಮಟದ ಮೇಲೆ ಹಾರಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತ್ರಿವರ್ಣ ಧ್ವಜವನ್ನು ಇಳಿಸುವ ಕೃತ್ಯವನ್ನು ರೈತರು ಎಸಗಬಾರದಿತ್ತು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಪ್ರತಿಭಟನೆನಿರತ ರೈತರು ಕೆಂಪುಕೋಟೆಯ ಮೇಲೆ ಹಾರಿಸಿದ ಬಾವುಟ ಯಾವುದು ಎಂದು ಹಲವರು ಪ್ರಶ್ನಿಸಿದ್ದಾರೆ. ಅದು ಖಾಲಿಸ್ತಾನದ ಬಾವುಟ. ಖಾಲಿಸ್ತಾನದ ಬಾವುಟ ಹಾರಿಸುವ ಮೂಲಕ ರೈತರು ದೇಶಕ್ಕೆ, ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಮಧ್ಯೆ ಖಾಲಿಸ್ತಾನ ಹೋರಾಟಗಾರರು ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದೂ ಹಲವರು ಆರೋಪಿಸಿದ್ದಾರೆ.

ಆದರೆ, ರೈತರು ಕೆಂಪುಕೋಟೆಯ ಮೇಲೆ
ಹಾರಿಸಿದ್ದು ಖಾಲಿಸ್ತಾನದ ಬಾವುಟ ಅಲ್ಲ. ರೈತರು ಹಾರಿಸಿದ್ದು, ಸಿಖ್ಖರ ನಿಶಾನ್ ಸಾಹಿದ್ ಬಾವುಟ. ಎಲ್ಲಾ ಗುರುದ್ವಾರಗಳ ಎದುರು ಮತ್ತು ಗುಮ್ಮಟಗಳ ಮೇಲೆ ಈ ಧ್ವಜವನ್ನು ಹಾರಿಸಲಾಗುತ್ತದೆ. ಇದು ಸಿಖ್ಖರ ಧಾರ್ಮಿಕ ಬಾವುಟ. ತ್ರಿಕೋನಾಕೃತಿಯಲ್ಲಿ ಇರುವ ಈ ಧ್ವಜದ ಮಧ್ಯಭಾಗದಲ್ಲಿ ನಿಶಾನೆ (ಗುರಿ) ಚಿತ್ರವಿರುತ್ತದೆ. ಧ್ವಜದ ಕೆಳತುದಿಯಲ್ಲಿ ಒಂದು ಕುಚ್ಚು ಇರುತ್ತದೆ. ಧ್ವಜದ ಬಣ್ಣ ಹಳದಿಯಾಗಿದ್ದರೆ, ನಿಶಾನೆಯ ಬಣ್ಣ ನೀಲಿ ಆಗಿರುತ್ತದೆ. ಧ್ವಜದ ಬಣ್ಣ ನೀಲಿ ಆಗಿದ್ದರೆ, ನಿಶಾನೆಯ ಬಣ್ಣ ಹಳದಿ ಆಗಿರುತ್ತದೆ.

ರೈತ ಸಂಘಟನೆಗಳೂ ಇದನ್ನು ಸ್ಪಷ್ಟಪಡಿಸಿವೆ. ಹಲವು ಮಾಧ್ಯಮ ಸಂಸ್ಥೆಗಳು ಈ ಸಂಬಂಧ ಫ್ಯಾಕ್ಟ್‌ಚೆಕ್ ವರದಿ ಮಾಡಿವೆ. ಇದು ಖಾಲಿಸ್ತಾನದ ಧ್ವಜ ಅಲ್ಲ ಎಂಬುದನ್ನು ದೃಢಪಡಿಸಿವೆ.

ಖಾಲಿಸ್ತಾನದ ಧ್ವಜದ ಬಣ್ಣವೂ ಹಳದಿ. ಆದರೆ ಧ್ವಜವು ಆಯತಾಕಾರದಲ್ಲಿ ಇರುತ್ತದೆ. ಧ್ವಜದ ಮಧ್ಯಭಾಗದಲ್ಲಿ ನಿಶಾನೆ ಮತ್ತು ಸಿಂಹದ ಗುರುತು ಇರುತ್ತದೆ. ಜತೆಗೆ ಖಾಲಿಸ್ತಾನ ಎಂದು ಬರೆದಿರುತ್ತದೆ.


ರ್‍ಯಾಲಿಯಲ್ಲಿ ವಿಂಟೇಜ್ ಟ್ರ್ಯಾಕ್ಟರ್‌ಗಳ ಕಲರವ

ನವದೆಹಲಿ: ದೆಹಲಿಯಲ್ಲಿ ಮಂಗಳವಾರ ನಡೆದ ರೈತರ ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿ ಹಲವು ವಿಂಟೇಜ್ ಟ್ರ್ಯಾಕ್ಟರ್‌ಗಳು ಗಮನ ಸೆಳೆದವು. 50-60 ವರ್ಷದಷ್ಟು ಹಳೆಯ ಟ್ರ್ಯಾಕ್ಟರ್‌ಗಳು ಹೊಸ ಟ್ರ್ಯಾಕ್ಟರ್‌ಗಳ ಸಮಕ್ಕೂ ಪರೇಡ್ ನಡೆಸಿದವು.

ಭವಜೀತ್ ಸಿಂಗ್ ಎಂಬುವವರು ಸೋವಿಯತ್ ರಷ್ಯಾ ಕಾಲದ ಟ್ರ್ಯಾಕ್ಟರ್‌ ಅನ್ನು ಪರೇಡ್‌ನಲ್ಲಿ ಚಲಾಯಿಸಿದರು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಐಟಿ ಉದ್ಯೋಗಿ ಆಗಿರುವ ಭವಜೀತ್ ಅವರು, ಈಗ ರಜೆ ಮೇಲೆ ಭಾರತಕ್ಕೆ ಬಂದಿದ್ದಾರೆ. ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಹೋರಾಟದ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಭವಜೀತ್ ಅವರು 1968ರಲ್ಲಿ ಸೋವಿಯತ್ ರಷ್ಯಾದಲ್ಲಿ ತಯಾರಾದ ಡಿಟಿ-14 ಎಂಬ ಟ್ರ್ಯಾಕ್ಟರ್ ಅನ್ನು ಚಲಾಯಿಸಿದರು. ಪರೇಡ್‌ನಲ್ಲಿ ಭಾಗಿಯಾದ ಅತ್ಯಂತ ಹಳೆಯ ಟ್ರ್ಯಾಕ್ಟರ್‌ಗಳಲ್ಲಿ ಇದೂ ಒಂದು.

‘ನಮ್ಮ ಕುಟುಂಬ ಈ ಟ್ರ್ಯಾಕ್ಟರ್ ಅನ್ನು 25 ವರ್ಷಗಳಿಂದ ಬಳಸುತ್ತಿದೆ. ಸ್ಟೀರಿಂಗ್ ವ್ಹೀಲ್ ಹೊರತುಪಡಿಸಿ, ಉಳಿದೆಲ್ಲಾ ಮೂಲ ಬಿಡಿಭಾಗಗಳು ಹಾಗೆಯೇ ಇವೆ’ ಎಂದು ಅವರು ಮಾಹಿತಿ ನೀಡಿದರು.

ಅಮರಿಂದರ್ ಸಿಂಗ್ ಅವರ ಮಹೀಂದ್ರಾ ಬಿ-275 ಟ್ರ್ಯಾಕ್ಟರ್‌ 40 ವರ್ಷಕ್ಕೂ ಹಳೆಯದ್ದು. ‘ನಾನು ಹುಟ್ಟಿದಾಗ, 1978ರಲ್ಲಿ ನನ್ನ ತಂದೆ ಇದನ್ನು ಖರೀದಿಸಿದ್ದರು. ನಮ್ಮ ಊರಿನ ಎಲ್ಲರೂ ಒಂದಲ್ಲಾ ಒಂದು ಸಲ ಈ ಟ್ರ್ಯಾಕ್ಟರ್‌ ಅನ್ನು ಚಲಾಯಿಸಿದ್ದಾರೆ’ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್‌ನ ಬಣ್ಣ ಮಾಸಿದ್ದು ಬಿಟ್ಟರೆ, ಉಳಿದೆಲ್ಲಾ ಬಿಡಿಭಾಗಗಳು ಉತ್ತಮ ಸ್ಥಿತಿಯಲ್ಲಿವೆ.

ಖಾಲಿಸ್ತಾನ್‌ ಧ್ವಜ: ನಳಿನ್‌ ಆಕ್ರೋಶ

ಬೆಂಗಳೂರು: ‘ದೇಶ ವಿರೋಧಿ ಶಕ್ತಿಗಳು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಖಾಲಿಸ್ತಾನ್ ಧ್ವಜ ಹಾರಿಸಿದ್ದು, ಇದು ಅಕ್ಷಮ್ಯ ಅಪರಾಧ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ‘ಜ.26 ದೇಶವಾಸಿಗಳಿಗೆ ಪವಿತ್ರವಾದ ದಿನ. ಸಂವಿಧಾನವನ್ನು ಗೌರವಿಸಿ, ಬದ್ಧತೆ ಪ್ರದರ್ಶಿಸಬೇಕಾದ ದಿನದಂದೇ ಪ್ರಜಾಪ್ರಭುತ್ವ ಧಿಕ್ಕರಿಸಿ, ಗೂಂಡಾಗಿರಿ ನಡೆಸಿ, ದೇಶಕ್ಕೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಲಾಗಿದೆ’ ಎಂದಿದ್ದಾರೆ.

ಸರ್ಕಾರದ ಅಂತ್ಯ ಸನ್ನಿಹಿತ: ಡಿಕೆಶಿ

ಗೌರಿಗದ್ದೆ (ಚಿಕ್ಕಮಗಳೂರು): ‘ಇದು ರೈತ ವಿರೋಧಿ ಸರ್ಕಾರ ಎಂಬುದಕ್ಕೆ ಗಣರಾಜ್ಯೋತ್ಸವದ ದಿನ ಪ್ರತಿಭಟನೆ ನಡೆಯುತ್ತಿರುವುದೇ ಸಾಕ್ಷಿ. ಈ ಸರ್ಕಾರಕ್ಕೆ ಅಂತ್ಯ ಸಮೀಪಿಸುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈತರ ಹೋರಾಟ ಮಾಡಲು ದೆಹಲಿಯಲ್ಲೇ ಬಿಟ್ಟಿದ್ದಾರೆ. ಬೆಂಗಳೂರಿನ ಒಳಕ್ಕೆ ರೈತರು ಬರಲು ಏಕೆ ಬಿಡುತ್ತಿಲ್ಲ? ರೈತರು ಇಲ್ಲದಿದ್ದರೆ ಬೆಂಗಳೂರಿನಲ್ಲಿ ಇವರು ಊಟ ಮಾಡಲಿಕ್ಕೆ ಸಾಧ್ಯ ಇದೆಯಾ’ ಎಂದು ಪ್ರಶ್ನಿಸಿದರು.

‘ಸಾಹುಕಾರರ ದೊಡ್ಡ ಕಾರುಗಳಷ್ಟೇ ಬೆಂಗಳೂರಿನಲ್ಲಿ ಓಡಾಡಬೇಕಾ? ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಿ. ರೈತರ ಟ್ರ್ಯಾಕ್ಟರ್‌ಗಳು ಓಡಾಡಿದರೆ ತಪ್ಪೇನಿದೆ? ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರು ರಾಜ್ಯದ ಜನರ ಆಸ್ತಿ, ಸರ್ಕಾರ ನಡೆಸುವವರ ಆಸ್ತಿ ಅಲ್ಲ. ರೈತರನ್ನು ಬೆಂಗಳೂರಿಗೆ ಬಿಡದೆ ತಡೆದಿರುವುದು ಖಂಡನೀಯ. ಅದರ ಕೋಪ, ತಾಪ, ಶಾಪ ಎಲ್ಲವೂ ಈ ಸರ್ಕಾರಕ್ಕೆ ತಗುಲುತ್ತದೆ’ ಎಂದರು.

‘ಭಯೋತ್ಪಾದಕರ ಹೋರಾಟ’

ಕೊಪ್ಪಳ: ‘ದೆಹಲಿಯ ಹೋರಾಟದಲ್ಲಿ ಖಾಲಿಸ್ತಾನಿಗಳು, ಭಯೋತ್ಪಾದಕರು ಸೇರಿಕೊಂಡಿದ್ದಾರೆ. ಭಯೋತ್ಪಾದಕರ ಈ ಹೋರಾಟಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನಿ ಮೋದಿ ಅವರ ಜನಪ್ರಿಯತೆ ಸಹಿಸದೇ ಇವರೆಲ್ಲ ಭಯೋತ್ಪಾದನಾ ಕೃತ್ಯ ನಡೆಸಿದ್ದಾರೆ. ಕೆಂಪುಕೋಟೆಗೆ ತನ್ನದೇ ಆದ ಘನತೆ ಇದೆ. ರೈತ ಧ್ವಜಾರೋಹಣ ಮಾಡಲು ವಿರೋಧವಿಲ್ಲ. ಆತ ಪ್ರಧಾನಿಯಾಗಿ ಧ್ವಜಾರೋಹಣ ಮಾಡಲಿ. ಮುಂದೊಂದು ದಿನ ರೈತರ ಹೆಸರಿನಲ್ಲಿ ಕೆಲವರು ಪಾಕಿಸ್ತಾನ, ಚೀನಾ ಗಡಿಯಲ್ಲಿನ ನಮ್ಮ ಸೈನಿಕರ ಮೇಲೆ ಗುಂಡು ಹಾರಿಸಿದರೆ ಅದಕ್ಕೆ ಯಾರು ಹೊಣೆ’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕಾಯ್ದೆಗಳ ಫಲ ಕಾದು ನೋಡಲಿ’

ಚಿಕ್ಕಮಗಳೂರು: ‘ಕೃಷಿ ಕಾಯ್ದೆಗಳ ಫಲ ಏನು ಎಂಬುದನ್ನು ಕಾದು ನೋಡಬೇಕು. ರೈತರಿಗೆ ವಿರುದ್ಧ ಇದ್ದರೆ ತಿದ್ದುಪಡಿ ಮಾಡಲು, ಹಿಂಪಡೆಯಲು ಅವಕಾಶ ಇದೆ. ಈ ಕಾಯ್ದೆಗಳು ರೈತ ವಿರೋಧಿ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಬೂಟಾಟಿಕೆ ಪ್ರದರ್ಶಿಸುತ್ತಿದೆ. ಕಾಂಗ್ರೆಸ್‌ 2019ರ ಪ್ರಣಾಳಿಕೆಯಲ್ಲಿ ಏನು ಹೇಳಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. 2014ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಪಿಎಂಸಿ ಬಗ್ಗೆ ಬರೆದ ಪತ್ರ ಅವರ ಬಣ್ಣವನ್ನು ಬಯಲು ಮಾಡಿದೆ. ಬಿಜೆಪಿ ರೈತ ವಿರೋಧಿ ಎಂಬ ಅಭಿಪ್ರಾಯ ರೂಪಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ದೂಷಿಸಿದರು.

‘ನಕಲಿ ರೈತರಿಂದ ಹಿಂಸಾಚಾರ’

ಬೆಂಗಳೂರು: ‘ರೈತರ ಮುಖವಾಡ ಧರಿಸಿದ ವ್ಯಕ್ತಿಗಳು ದೆಹಲಿಯಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ ನಡೆಸಿದ್ದಾರೆ. ಕಾಂಗ್ರೆಸ್‌ ಪಕ್ಷ ಮತ್ತು ಸಮಾಜಘಾತುಕ ಶಕ್ತಿಗಳೇ ಇದಕ್ಕೆ ನೇರ ಕಾರಣ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ಎನ್‌. ರವಿಕುಮಾರ್‌ ಆರೋಪಿಸಿದ್ದಾರೆ.

‘ಕೇಂದ್ರ ಸರ್ಕಾರ 11 ಬಾರಿ ರೈತರ ಜತೆ ಸಭೆ ನಡೆಸಿದೆ. ಆದರೂ, ಸಭೆಗಳನ್ನು ವಿಫಲಗೊಳಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಪ್ರತಿಭಟನೆ ನಡೆಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ನಡೆಸಿದವರೇ ಈ ಕೃತ್ಯದಲ್ಲೂ ಭಾಗಿಯಾಗಿದ್ದಾರೆ’ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.