ಬರ್ಹಾಂಪುರ: ಒಡಿಶಾ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ 20 ವರ್ಷದ ಯುವಕನೊಬ್ಬ ಶುಕ್ರವಾರ ಮೃತಪಟ್ಟಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ಯುವಕನನ್ನು ಗಂಜಾಂ ಜಿಲ್ಲೆಯ ಶ್ಯಾಮಸುಂದರಪುರದ ನಿವಾಸಿ ದೀಪ್ತಿ ರಂಜನ್ ದಾಶ್(20) ಎಂದು ಗುರುತಿಸಲಾಗಿದೆ.
ಛತ್ರಪುರದ ಪೊಲೀಸ್ ಮೀಸಲು ಮೈದಾನದಲ್ಲಿ ಶುಕ್ರವಾರ ದೈಹಿಕ ಪರೀಕ್ಷೆ ನಡೆದಿದ್ದು, 1600 ಮೀಟರ್ ಓಟದ ವೇಳೆ ದೀಪ್ತಿ ರಂಜನ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ತಕ್ಷಣವೇ ಅವರನ್ನು ಛತ್ರಪುರದ ಆಸ್ಪತ್ರೆಗೆ ಕರೆತರಲಾಯಿತು. ನಂತರ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಯುವಕ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಗಮೋಹನ್ ಮೀನಾ ತಿಳಿಸಿದ್ದಾರೆ.
ಓಟದ ಪರೀಕ್ಷೆ ಪ್ರಾರಂಭಿಸುವ ಮೊದಲು ಯುವಕನ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ದೀಪ್ತಿ ರಂಜನ್ ಫಿಟ್ ಆಗಿಯೇ ಇದ್ದರು. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಅವರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಮೀನಾ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಪೊಲೀಸರು ಮೃತ ಯುವಕನ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ನೇಮಕಾತಿಗಾಗಿ ಮೂರು ದಿನಗಳ ದೈಹಿಕ ಪರೀಕ್ಷೆಗಳು ಗುರುವಾರದಿಂದ ಪ್ರಾರಂಭವಾಗಿವೆ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಹಾಜರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.