ADVERTISEMENT

ನ್ಯಾಯಾಲಯಗಳು ಜನರಿಗೆ ತಲುಪಬೇಕು: ಸಿಜೆ ಚಂದ್ರಚೂಡ್‌ ಅಭಿಮತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2022, 9:38 IST
Last Updated 26 ನವೆಂಬರ್ 2022, 9:38 IST
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಚಂದ್ರಚೂಡ್‌ (ಪಿಟಿಐ ಚಿತ್ರ)
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಚಂದ್ರಚೂಡ್‌ (ಪಿಟಿಐ ಚಿತ್ರ)   

ನವದೆಹಲಿ: ನ್ಯಾಯಾಂಗ ಜನರಿಗೆ ತಲುಪಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್‌ ಅವರು ಅಭಿಪ್ರಾಯಪಟ್ಟರು.

ಸಂವಿಧಾನ ಅರ್ಪಣಾ ದಿನದ ಪ್ರಯುಕ್ತ ಶನಿವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನ್ಯಾಯಾಂಗವು ಜನರಿಗೆ ತಲುಪುವುದು ಅವಶ್ಯವಾಗಿದೆ. ಜನರೇ ನ್ಯಾಯಾಂಗದ ಬಳಿ ಬರಬೇಕು ಎನ್ನುವುದು ಸರಿಯಲ್ಲ‘ ಎಂದು ಅವರು ಹೇಳಿದರು.

ADVERTISEMENT

ನಮ್ಮಂಥ ವೈವಿಧ್ಯತೆ ಹೊಂದಿರುವ ದೇಶದಲ್ಲಿ, ಎಲ್ಲರಿಗೂ ನ್ಯಾಯ ದೊರಕುವುದೇ ದೊಡ್ಡ ಸವಾಲಾಗಿದೆ. ಎಲ್ಲರಿಗೂ ನ್ಯಾಯ ಲಭ್ಯವಾಗುವಂತೆ ಮಾಡಲು ಭಾರತೀಯ ನ್ಯಾಯಾಂಗವು ಹಲವು ಉಪಕ್ರಮಗಳನ್ನು ಕೈಗೊಳುತ್ತಿದೆ‘ ಎಂದು ಅವರು ನುಡಿದರು.

ಸುಪ್ರೀಂ ಕೋರ್ಟ್‌ ದೆಹಲಿಯ ತಿಲಕ್‌ ರಸ್ತೆಯಲ್ಲಿ ಇದ್ದರೂ, ದೇಶದ ಪ್ರತಿಯೊಬ್ಬರಿಗೂ ಸುಪ್ರೀಂ ಕೋರ್ಟ್‌ ಲಭ್ಯವಾಗುವಂತಿರಬೇಕು. ವರ್ಚ್ಯುವಲ್‌ ವೇದಿಕೆ ಮೂಲಕ ಇದೀಗ ತಾವಿರುವ ಜಾಗದಿಂದಲೇ ವಕೀಲರಿಗೆ ವಾದ ಮಂಡಿಸುವ ಅವಕಾಶ ಇದೆ. ಮುಖ್ಯನ್ಯಾಯಮೂರ್ತಿಯಾಗಿ ಪ್ರಕರಣಗಳ ಪಟ್ಟಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸುವುದರ ಬಗ್ಗೆ ನಾನು ಚಿಂತನೆ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಕಾನೂನು ವೃತ್ತಿಯಲ್ಲಿ ಹಿಂದುಳಿದ ಸಮುದಾಯಗಳ ಪಾಲ್ಗೊಳ್ಳುವಿಕೆ ಹೆಚ್ಚಳವಾಗಬೇಕು ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿಗಳು, ಭಾರತೀಯ ನ್ಯಾಯಾಲಯಗಳು ನೀಡಿರುವ ತೀರ್ಪುಗಳು ದಕ್ಷಿಣ ಆಫ್ರಿಕಾ, ಕೀನ್ಯಾ, ಆಸ್ಟ್ರೇಲಿಯಾ, ಜಮೈಕಾ, ಉಗಾಂಡ, ಬಾಂಗ್ಲಾದೇಶ, ಸಿಂಗಾಪುರ, ಫಿಜಿ ಹಾಗೂ ಇನ್ನಿತರ ದೇಶಗಳ ನ್ಯಾಯಾಲಯಗಳ ಮೇಲೂ ಪ್ರಭಾವ ಬೀರಿವೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.