ADVERTISEMENT

ನ್ಯಾಯ ನೀಡುವುದು ಕೇವಲ ನ್ಯಾಯಾಂಗದ ಕೆಲಸವಲ್ಲ: ಮುಖ್ಯ ನ್ಯಾಯಮೂರ್ತಿ ರಮಣ

ಪಿಟಿಐ
Published 15 ಆಗಸ್ಟ್ 2022, 20:00 IST
Last Updated 15 ಆಗಸ್ಟ್ 2022, 20:00 IST
   

ನವದೆಹಲಿ: ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವು ಸಾಂವಿಧಾನಿಕ ಹೊಣೆಗಾರಿಕೆಯ ಸಮಾನ ಜವಾಬ್ದಾರರು. ನ್ಯಾಯ ದೊರಕಿಸುವುದು ಕೇವಲ ನ್ಯಾಯಾಲಯಗಳ ಜವಾಬ್ದಾರಿ ಎಂಬ ಭಾವನೆಯನ್ನು ಸಂವಿಧಾನ ದೂರಮಾಡಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಸೋಮವಾರ ಹೇಳಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಸುಪ್ರೀಂ ಕೋರ್ಟ್‌ ಆವರಣದಲ್ಲಿ ಧ್ವಜಾರೋಹಣ ನಡೆಸಿದ ಬಳಿಕ ಮಾತನಾಡಿದ ಅವರು, ನಿರ್ದೇಶನಾತ್ಮಕ ತತ್ವಗಳ ಕುರಿತ ಸಂವಿಧಾನದ ವಿಧಿ 38ನ್ನು ಉಲ್ಲೇಖಿಸಿದರು. ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಂಶಗಳನ್ನು ಭದ್ರಪಡಿಸುವ ಮೂಲಕ ಸಾಮಾಜಿಕ ವ್ಯವಸ್ಥೆ ರೂಪಿಸುವುದು ಸರ್ಕಾರದ ಜವಾಬ್ದಾರಿ ಎಂದರು.

ನ್ಯಾಯಾಲಯವು ನ್ಯಾಯ ಮತ್ತು ನೆರವನ್ನು ಕೊಡುತ್ತದೆ ಎಂಬ ಭರವಸೆ ಜನರಿಗೆ ಇದೆ. ಆದ್ದರಿಂದಲೇ ಅವರು ವ್ಯಾಜ್ಯಗಳನ್ನು ನ್ಯಾಯಾಲಯಗಳಿಗೆ ತರುತ್ತಾರೆ. ಪರಿಸ್ಥಿತಿ ಅವರ ವಿರುದ್ಧ ಇರುವಾಗ ನ್ಯಾಯಾಂಗ ಅವರ ಬೆನ್ನಿಗೆ ನಿಲ್ಲುತ್ತದೆ ಎಂದು ಜನರಿಗೆ ತಿಳಿದಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಸಂವಿಧಾನದ ರಕ್ಷಕ ಭಾರತದ ಸುಪ್ರೀಂ ಕೋರ್ಟ್‌ ಆಗಿದೆ ಎಂದರು.

ADVERTISEMENT

ಸಂವಿಧಾನದ ವಿಧಿ 142ನ್ನು ಉಲ್ಲೇಖಿಸಿದ ಅವರು, ‘ಸಂಪೂರ್ಣ ನ್ಯಾಯ ನೀಡುವಲ್ಲಿ ಸುಪ್ರೀಂ ಕೋರ್ಟ್‌ಗೆ ಸಂವಿಧಾನವು ವಿಸ್ತೃತ ಅಧಿಕಾರ ಮತ್ತು ವ್ಯಾಪ್ತಿಯನ್ನು ನೀಡಿದೆ’ ಎಂದರು.

‘ಶೇ 43 ಜನಪ್ರತಿನಿಧಿಗಳಿಗೆ ಅಪರಾಧ ಹಿನ್ನೆಲೆ: ಕಾನೂನಿಗೆ ತಿದ್ದುಪಡಿ ಅಗತ್ಯ’
ದೇಶದ ಶೇಕಡಾ 43ರಷ್ಟು ಜನಪ್ರತಿನಿಧಿಗಳು ಅಪರಾಧ ಹಿನ್ನೆಲೆಯನ್ನು ಹೊಂದಿದ್ದಾರೆ. ಇಂಥವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯುವ ಕಾನೂನಿನ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್ ಬಾರ್‌ ಅಸೋಸಿಯೇಷನ್‌ (ಎಸ್‌ಸಿಬಿಎ) ಅಧ್ಯಕ್ಷ ವಿಕಾಸ್ ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯದ 75 ವರ್ಷಗಳ ನಂತರವೂಅಪರಾಧ ಹಿನ್ನೆಲೆ ಹೊಂದಿದ ಶೇಕಡ 43ರಷ್ಟು ಜನಪ್ರತಿನಿಧಿಗಳು ಚುನಾಯಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಬೇಕಾದ ಅಗತ್ಯವಿದೆ ಎಂದು ಭಾವಿಸುತ್ತೇನೆ. ಆದರೆ ಯಾವ ರಾಜಕೀಯ ಪಕ್ಷಗಳ ನೇತಾರರೂ ಈ ಕೆಲಸಕ್ಕೆಮುಂದಾಗುವುದಿಲ್ಲ. ನಾವೇ ಕಾನೂನಿಗೆ ತಿದ್ದುಪಡಿ ತರಬೇಕು’ ಎಂದು ಹೇಳಿದರು.

ಈ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.