ನವದೆಹಲಿ: ಸಂವಿಧಾನವು ಭಾರತದ ಅಸ್ತ್ರವಾಗಿದೆ. ಆದರೆ ಸಂಸ್ಥೆಗಳಿಲ್ಲದೆ ಇದ್ದರೆ ಅದು ಅರ್ಥಹೀನವಾಗಲಿದೆ. ಜೊತೆಗೆ ಎಲ್ಲಾ ಸಂಸ್ಥೆಗಳುಆರ್‌ಎಸ್ಎಸ್ ಕೈವಶವಾಗಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದರು.
ಶನಿವಾರ ಇಲ್ಲಿ ದಲಿತರ ಹೋರಾಟಗಳ ಕುರಿತಾದ 'ದಿ ದಲಿತ್ ಟ್ರುತ್' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ದಲಿತರು ತಮ್ಮ ಹಕ್ಕುಗಳಿಗಾಗಿ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರು ತೋರಿದ ಹಾದಿಯಲ್ಲಿ ಹೋರಾಟ ನಡೆಸಬೇಕು' ಎಂದು ಸಲಹೆ ನೀಡಿದರು.
‘ಅಂಬೇಡ್ಕರ್ ಅವರು ಜನತೆಗೆ ಸಂವಿಧಾನ ಎಂಬ ಅಸ್ತ್ರವನ್ನು ನೀಡಿದರು. ಆದರೆ ಇಂದು ಮಾಧ್ಯಮಗಳನ್ನು ನಿಯಂತ್ರಿಸಲಾಗುತ್ತಿದೆ. ಜೊತೆಗೆ ರಾಜಕೀಯ ನಾಯಕರ ಮೇಲಿನ ನಿಯಂತ್ರಣಕ್ಕಾಗಿ 'ಪೆಗಾಸಸ್' ಬಳಸಲಾಗುತ್ತಿದೆ. ಇದರಿಂದ ಸಂವಿಧಾನ ಎಂಬ ಅಸ್ತ್ರಕ್ಕೆ ಯಾವುದೇ ಅರ್ಥವಿಲ್ಲದಂತಾಗಿದೆ ಎಂದರು. ತನ್ಮೂಲಕ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಸಂವಿಧಾನದ ಅಸ್ತಿತ್ವ ಕಳೆದುಕೊಂಡರೆ, ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗ, ನಿರುದ್ಯೋಗಿಗಳು, ಕೃಷಿಕರು ಮತ್ತು ಬಡವರು ಸಂಕಷ್ಟಕ್ಕೆ ತುತ್ತಾಗಲಿದ್ದಾರೆ. ಇದು ಭಾರತದ ಪರಿಸ್ಥಿತಿಯಾಗಿದೆ ಎಂದು ಹೇಳಿದರು.
ತನಿಖಾ ಸಂಸ್ಥೆಗಳಿಗೆ ಬೆದರಿದ ಮಾಯಾವತಿ:
‘ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜಂಟಿಯಾಗಿ ಸ್ಪರ್ಧೆ ಹಾಗೂ ಮಾಯಾವತಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವ ಕೋರಿಕೆಯನ್ನು ಬಿಎಸ್‌ಪಿಗೆ ಕಾಂಗ್ರೆಸ್ ನೀಡಿತ್ತು. ಆದರೆ ಕೇಂದ್ರದ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ ಹಾಗೂ ಪೆಗಾಸಸ್‌ಗಳಿಗೆ ಬೆದರಿದ ಮಾಯಾವತಿ ಅವರು, ನಮ್ಮ ಜೊತೆ ಮಾತನಾಡಲೂ ಸಹ ಮುಂದಾಗಲಿಲ್ಲ. ತನ್ಮೂಲಕ ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಟ್ಟರು’ ಎಂದು ರಾಹುಲ್ ಗಾಂಧಿ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.