ADVERTISEMENT

Maharashtra Polls | ಬಿಜೆಪಿ ಪಾಲಿಗೆ ಸಂವಿಧಾನ ‘ಖಾಲಿ ಪುಸ್ತಕ’: ರಾಹುಲ್‌ ಲೇವಡಿ

ಪಿಟಿಐ
Published 16 ನವೆಂಬರ್ 2024, 13:06 IST
Last Updated 16 ನವೆಂಬರ್ 2024, 13:06 IST
<div class="paragraphs"><p>ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

ಅಮರಾವತಿ: ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ದೇಶದ ‘ಡಿಎನ್ಎ’ ಎಂದು ಪರಿಗಣಿಸುತ್ತದೆ. ಆದರೆ ಆಡಳಿತಾರೂಢ ಬಿಜೆಪಿ ಮತ್ತು ಆರ್‌ಎಸ್ಎಸ್‌ ಅದನ್ನು ‘ಖಾಲಿ ಪುಸ್ತಕ’ವಾಗಿ ಪರಿಗಣಿಸುತ್ತವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶನಿವಾರ ಆರೋಪಿಸಿದರು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು, ‘ರಾಹುಲ್‌ ಗಾಂಧಿ ಅವರು ಪ್ರಚಾರ ರ‍್ಯಾಲಿಗಳಲ್ಲಿ ಖಾಲಿ ಹಾಳೆ ಇರುವ ಸಂವಿಧಾನದ ಪ್ರತಿಯನ್ನು ತೋರಿಸುತ್ತಾರೆ’ ಎಂದು ಆರೋಪಿಸಿದ್ದರು. ಅದಕ್ಕೆ ಪ್ರತಿಯಾಗಿ ರಾಹುಲ್‌ ಗಾಂಧಿ ಈ ಹೇಳಿಕೆ ಮೂಲಕ ತಿರುಗೇಟು ನೀಡಿದರು.

ADVERTISEMENT

ರ‍್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಅವರು, ‘ಮಹಾರಾಷ್ಟ್ರದಲ್ಲಿ ಮಾಡಿದಂತೆ ಶಾಸಕರನ್ನು ಖರೀದಿಸಿ ಸರ್ಕಾರಗಳನ್ನು ಉರುಳಿಸಬಹುದು ಮತ್ತು ಉದ್ಯಮಿಗಳ 16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಬಹುದು ಎಂದು ಸಂವಿಧಾನದಲ್ಲಿ ಎಲ್ಲೂ ಬರೆದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

’ನಾನು ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಪರವಾಗಿ ಇರುವ ಕಾರಣ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಿಜೆಪಿಯು ಕೋಟಿಗಟ್ಟಲೆ ಹಣವನ್ನು ವ್ಯಯಿಸಿತು‘ ಎಂದು ಆರೋಪಿಸಿದರು. 

ಸರಕು ಮತ್ತು ಸೇವಾ ತೆರಿಗೆ ಮತ್ತು ಅಧಿಕ ಮೌಲ್ಯದ ನೋಟುಗಳ ರದ್ದತಿ, ರೈತರು ಮತ್ತು ಸಣ್ಣ ವ್ಯಾಪಾರಿಗಳನ್ನು ಕೊಲ್ಲುವ ಸಾಧನಗಳು. ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಿದೆ ಮತ್ತು ಇದೇ ಕಾರಣದಿಂದ ಸಮಾಜದಲ್ಲಿ ದ್ವೇಷವು  ಹೆಚ್ಚುತ್ತಿದೆ ಎಂದರು.

’ಪ್ರಧಾನಿ ಮೋದಿ ಅವರೇ ಕೈಗಾರಿಕೋದ್ಯಮಿಗಳು ನಿಮ್ಮನ್ನು ಆಯ್ಕೆ ಮಾಡಿಲ್ಲ. ದೇಶದ ಜನರು ನಿಮ್ಮನ್ನು ಆಯ್ಕೆ ಮಾಡಿದ್ದಾರೆ‘ ಎಂದು ಹರಿಹಾಯ್ದರು.

‘ಮೋದಿ ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ’

‘ಕಳೆದ ಲೋಕಸಭಾ ಚುನಾವಣೆ  ವೇಳೆ ಸಂಸತ್ತಿನಲ್ಲಿ ಮಾತನಾಡುತ್ತಾ ಜಾತಿ ಗಣತಿ ನಡೆಸುತ್ತೇವೆ ಮತ್ತು ಮೀಸಲಾತಿಗೆ ಇರುವ ಶೇ 50ರ ಮಿತಿಯನ್ನು ತೆಗೆದುಹಾಕುತ್ತೇವೆ (‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ) ಎಂದು ಹೇಳಿದ್ದೆ. ಈಗ ಅವರು  ರಾಹುಲ್‌ ಗಾಂಧಿ ಮೀಸಲಾತಿ ವಿರೋಧಿ ಎಂದು ಹೇಳುತ್ತಿದ್ದಾರೆ. ಅಮೆರಿಕದ ನಿರ್ಗಮಿತ ಅಧ್ಯಕ್ಷರಂತೆ ಮೋದಿ ಅವರು ಸಹ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾರೆ’ ಎಂದು ಟೀಕಿಸಿದರು. ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝಲೆನ್‌ಸ್ಕಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಎಂದು ಕರೆದಿದ್ದರು. ಈ ಘಟನೆಯನ್ನು ಸ್ಮರಿಸಿ ಮೇಲಿನ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ಮೋದಿ ಅವರು ಜಾತಿ ಗಣತಿ ವಿರೋಧಿ. ಇಲ್ಲದಿದ್ದರೆ 5–7 ವರ್ಷಗಳ ಹಿಂದೆಯೇ ಅವರು ಗಣತಿ ನಡೆಸುಸುತ್ತಿದ್ದರು ಎಂದು ಹೇಳಿದರು.

ರಾಹುಲ್‌ ವಿರುದ್ಧ ಮೋದಿ ಶಾ ಅಪಪ್ರಚಾರ: ಪ್ರಿಯಾಂಕಾ 

ಶಿರಡಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ಮೀಸಲಾತಿ ವಿಚಾರವಾಗಿ ರಾಹುಲ್‌ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶನಿವಾರ ಆರೋಪಿಸಿದರು.

ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ‘ದೇಶದಲ್ಲಿ ಜಾತಿ ಗಣತಿ ನಡೆಸಬೇಕು ಎಂದು ಒತ್ತಾಯಿಸುವ ಕಾರಣ ರಾಹುಲ್‌ ಗಾಂಧಿ ಅವರನ್ನು ಕಂಡರೆ ಈ ನಾಯಕರಿಗೆ ಭಯ’ ಎಂದು ಹೇಳಿದರು. ‘ನನ್ನ ಸಹೋದರ (ರಾಹುಲ್‌ ಗಾಂಧಿ) ಮೀಸಲಾತಿ ವಿರೋಧಿ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಅವರು ಹೇಳುತ್ತಾರೆ. ನ್ಯಾಯ ಮತ್ತು ಜಾತಿ ಗಣತಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿರುವುದು ತಿಳಿದೂ ಅವರು ಇಂಥ ಸುಳ್ಳು ಹೇಳಿಕೆ ನೀಡುತ್ತಾರೆ’ ಎಂದು ಕಿಡಿಕಾರಿದರು.

‘ಮಹಾರಾಷ್ಟ್ರದ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆ ಇದೆ. ಈ ನೆಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅವರನ್ನು ಅವಮಾನಿಸಲಾಗಿದೆ ನಿಮ್ಮನ್ನು ಅವಮಾನಿಸಲಾಗಿದೆ. ಮೋದಿ ಅವರೂ ಸೇರಿದಂತೆ ಈ ಎಲ್ಲ ನಾಯಕರು ಶಿವಾಜಿ ಅವರ ಹೆಸರನ್ನು ಬಳಸಿಕೊಳ್ಳುತ್ತಾರೆ ಆದರೆ ಅವರಿಗೆ ಗೌರವ ನೀಡುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.  

ಸಂಸತ್‌ ಹೊರಗಿದ್ದ ಶಿವಾಜಿ ಪ್ರತಿಮೆಯನ್ನು ತೆಗೆದುಹಾಕಲಾಯಿತು. ಸಿಂಧುದುರ್ಗದಲ್ಲಿ ನಿರ್ಮಾಣ ಮಾಡಿದ್ದ ಪ್ರತಿಮೆಯು ಭ್ರಷ್ಟಾಚಾರದಿಂದಾಗಿ ನಡೆದ ಕಳಪೆ ಕಾಮಗಾರಿಯಿಂದಾಗಿ ಕುಸಿದು ಬಿತ್ತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.