ADVERTISEMENT

ಲೈಂಗಿಕ ದೌರ್ಜನ್ಯ ಆರೋಪ | ತನಿಖೆಯಿಂದ ರಾಜ್ಯಪಾಲರಿಗೆ ವಿನಾಯಿತಿ; ಕೋರ್ಟ್ ಆಕ್ಷೇಪ

ಸಂವಿಧಾನದ ವಿಧಿ 361 (2)ರ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 14:41 IST
Last Updated 19 ಜುಲೈ 2024, 14:41 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ತನಿಖೆಯಿಂದ ರಾಜ್ಯಪಾಲರಿಗೆ ಸಾರಾಸಗಟಾಗಿ ವಿನಾಯಿತಿ ನೀಡುವ ಸಂವಿಧಾನ ವಿಧಿ 361 (2)ರ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್‌ ಶುಕ್ರವಾರ, ಅಟಾರ್ನಿ ಜನರಲ್ ಅವರ ನೆರವು ಕೋರಿತು.

ಕೋಲ್ಕತ್ತದ ರಾಜಭವನದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು, ‘ತನಿಖೆಯಿಂದ ರಾಜ್ಯಪಾಲರಿಗೆ ವಿನಾಯಿತಿ ನೀಡುವ ಸಂವಿಧಾನದ ವಿಧಿಯ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಿದ್ದರು. 

ಇದಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರಿದ್ದ ಪೀಠವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು. ಅಲ್ಲದೆ, ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನೂ ಪ್ರತಿವಾದಿಯಾಗಿ ಉಲ್ಲೇಖಿಸಲು ಅರ್ಜಿದಾರರಿಗೆ ಅವಕಾಶ ನೀಡಿತು.

ADVERTISEMENT

ಅರ್ಜಿದಾರ ಮಹಿಳೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶ್ಯಾಂ ದಿವನ್, ‘ಈ ಪ್ರಕರಣದ ತನಿಖೆಗೆ ಸಂವಿಧಾನದ 361ನೇ ವಿಧಿ ಅಡ್ಡಿಯಾಗಬಾರದು’ ಎಂದು ಪ್ರತಿಪಾದಿಸಿದರು. ‘ಸಾಕ್ಷ್ಯಗಳನ್ನು ಈಗ  ಕ್ರೋಡಿರಿಸಲಾಗುತ್ತಿದೆ. ಅನಿರ್ದಿಷ್ಟಾವಧಿಗೆ ವಿಚಾರಣೆ ಮುಂದೂಡಬಾರದು’ ಎಂದು ಮನವಿ ಕೋರಿದರು.

ಅರ್ಜಿದಾರ ಮಹಿಳೆಯು, ‘ತಾನು ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಅವರ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆ ನಡೆಸುವಂತೆ ಬಂಗಾಳದ ಪೊಲೀಸರಿಗೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದ್ದರು.  ರಾಜ್ಯಪಾಲರಿಗಿರುವ ವಿನಾಯಿತಿಯ ಕಾರಣದಿಂದ ತನಗೆ ‘ಪರಿಹಾರ’ ಸಿಗುತ್ತಿಲ್ಲ ಎಂದೂ ಪ್ರತಿಪಾದಿಸಿದ್ದರು.

ಸಂವಿಧಾನದ ವಿಧಿ 361 (2) ಪ್ರಕಾರ ರಾಷ್ಟ್ರಪತಿ ಅಥವಾ ರಾಜ್ಯಪಾಲರುಗಳ ವಿರುದ್ಧ ಅವರ ಸೇವಾವಧಿಯಲ್ಲಿ ಯಾವುದೇ ಕೋರ್ಟ್‌ನಲ್ಲಿ ಕ್ರಿಮಿನಲ್‌ ವಿಚಾರಣೆ ನಡೆಸುವಂತಿಲ್ಲ.

ಈ ಅಂಶವನ್ನೇ ಉಲ್ಲೇಖಿಸಿರುವ ಅರ್ಜಿದಾರರು, ಈ ವಿನಾಯಿತಿಯನ್ನು ರಾಜ್ಯಪಾಲರಿಗೆ ಕಾನೂನುಬಾಹಿರ ಕ್ರಮಗಳನ್ನು ಕೈಗೊಳ್ಳಲು ತನಗಿರುವ  ಅವಕಾಶ ಎಂದು ಅರ್ಥಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.

‘ಅಲ್ಲದೆ, ಇಂತಹ ವಿನಾಯಿತಿಯು, ಪೊಲೀಸರಿಗೆ ಇರುವ ಅಪರಾಧಗಳ ತನಿಖೆಯನ್ನು ನಡೆಸುವ  ಹಾಗೂ ತಪ್ಪಿತಸ್ಥರ ಹೆಸರನ್ನು ದೂರು/ಎಫ್‌ಐಆರ್‌ನಲ್ಲಿ ದಾಖಲಿಸುವ ಅಧಿಕಾರವನ್ನು ದುರ್ಬಲಗೊಳಿಸಬಾರದು’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

‘ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಸಂವಿಧಾನದತ್ತವಾಗಿ ತನಿಖೆಯಿಂದ ಇರುವ ವಿನಾಯಿತಿಯ ಅರ್ಥ, ರಾಜ್ಯಪಾಲರು ಅಸಮರ್ಪಕವಾಗಿ ನಡೆದುಕೊಳ್ಳಬಹುದು ಮತ್ತು ಲಿಂಗಾಧಾರಿತ ಹಿಂಸೆ ನಡೆಸಬಹುದು ಎಂದಲ್ಲ ಎಂದು ವಾದಿಸಲಾಗಿದೆ.

ಅರ್ಜಿದಾರ ಮಹಿಳೆಯು ಇದೇ ವರ್ಷದ ಮೇ 2ರಂದು ಕೋಲ್ಕತ್ತದಲ್ಲಿರುವ ರಾಜಭವನದ ಅಧಿಕಾರಿಗೆ ದೂರು ನೀಡಿದ್ದರು. ರಾಜ್ಯಪಾಲರ ವಿರುದ್ಧ, ‘ಉತ್ತಮ ಕೆಲಸ ಒದಗಿಸುವ ಆಮಿಷವೊಡ್ಡಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ’ ಆರೋಪ ಮಾಡಿದ್ದರು.

ಒಡಿಸ್ಸಿ ನೃತ್ಯಪಟುವೊಬ್ಬರು, ರಾಜ್ಯಪಾಲರ ವಿರುದ್ಧ ತನ್ನ ಮೇಲೆ ನವದೆಹಲಿಯಲ್ಲಿ ಜನವರಿ 2023ರಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದ ವಿವರಗಳಿದ್ದ ಮಾಧ್ಯಮದ ವರದಿಯನ್ನೂ ಉಲ್ಲೇಖಿಸಿದ್ದರು. ಕೋಲ್ಕತ್ತ ಪೊಲೀಸರು, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಈ ಅಂಶವಿದೆ ಎಂದು ವರದಿ ಉಲ್ಲೇಖಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.