ADVERTISEMENT

ಕೇರಳದಲ್ಲಿ ಮೋದಿ, ರಾಹುಲ್‌ ಪ್ರಚಾರ ಸಭೆ: ಮಾತಿನ ಸಮರ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 19:49 IST
Last Updated 15 ಏಪ್ರಿಲ್ 2024, 19:49 IST
ಕೇರಳದ ಆಲತ್ತೂರುನಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಮೋದಿ –ಪಿಟಿಐ 
ಕೇರಳದ ಆಲತ್ತೂರುನಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಮೋದಿ –ಪಿಟಿಐ    

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕೇರಳದ ತಿರುವನಂತಪುರ ಮತ್ತು ತ್ರಿಶ್ಯೂರ್‌ನಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಾವು ಪ್ರತಿನಿಧಿಸುತ್ತಿರುವ ವಯನಾಡ್‌ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಿದರು 

‘ಸಾಂವಿಧಾನಿಕ ಸಂಸ್ಥೆಗಳು ಮೋದಿ ವೈಯಕ್ತಿಕ ಆಸ್ತಿಯಲ್ಲ’

ವಯನಾಡ್ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ‘ದೇಶದ ಸಾಂವಿಧಾನಿಕ ಸಂಸ್ಥೆಗಳು ಮೋದಿ ಅವರ ವೈಯಕ್ತಿಕ ಆಸ್ತಿಯಲ್ಲ. ಅವುಗಳು ಭಾರತದ ಪ್ರತಿಯೊಬ್ಬ ಪ್ರಜೆಗೂ ಸೇರಿದ್ದು’ ಎಂದು ಹೇಳಿದ್ದಾರೆ.

ADVERTISEMENT

ಕೇಂದ್ರದ ಆಡಳಿತಾರೂಢ ಬಿಜೆಪಿಯು ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಕೈವಶಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ರಾಹುಲ್‌, ಮುಂಬರುವ ಲೋಕಸಭಾ ಚುನಾವಣೆಯು ಸಂವಿಧಾನವನ್ನು ರಕ್ಷಿಸಲು ಬಯಸುವವರು ಮತ್ತು ಅದನ್ನು ನಾಶಮಾಡಲು ಹೊರಟಿರುವವರ ನಡುವಣ ಹೋರಾಟವಾಗಿದೆ ಎಂದರು. 

ವಯನಾಡ್‌ ಕ್ಷೇತ್ರದ ವೆಳ್ಳಮುಂಡದಲ್ಲಿ ರೋಡ್‌ ಶೋ ನಡೆಸಿದ ಅವರು, ಚುನಾವಣಾ ಆಯೋಗ, ನ್ಯಾಯಾಂಗ, ಸಿಬಿಐ, ಇ.ಡಿ, ಆದಾಯ ತೆರಿಗೆ ಇಲಾಖೆ ಅಲ್ಲದೆ ಸರ್ಕಾರದ ಇತರ ಉನ್ನತ ಹುದ್ದೆಗಳಲ್ಲಿ ತಮ್ಮವರನ್ನು ನೇಮಿಸಿಕೊಳ್ಳುವ ಮೂಲಕ ಆರ್‌ಎಸ್‌ಎಸ್‌ನವರು ಇಡೀ ವ್ಯವಸ್ಥೆಯನ್ನು  ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

‘ಆರ್‌ಎಸ್ಎಸ್‌ನವರಿಗೆ ಸಂವಿಧಾನ ಬದಲಿಸಲು ಕಾಂಗ್ರೆಸ್‌ ಪಕ್ಷ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದರು.

‘ಅಮೇಠಿ ಕ್ಷೇತ್ರ ಉಳಿಸಲಾಗದೆ ಕೇರಳಕ್ಕೆ ಬಂದ ಯುವರಾಜ’

ತಿರುವನಂತಪುರ/ ತ್ರಿಶ್ಯೂರ್ (ಪಿಟಿಐ): ಕಾಂಗ್ರೆಸ್‌ ಮತ್ತು ಸಿಪಿಎಂ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ಉತ್ತರ ಪ್ರದೇಶದ ತನ್ನ ಕುಟುಂಬದ ಕ್ಷೇತ್ರವನ್ನು (ಅಮೇಠಿ) ಉಳಿಸಿಕೊಳ್ಳಲಾಗದ ಕಾಂಗ್ರೆಸ್‌ನ ‘ಯುವರಾಜ’, ಮತ ಗಳಿಕೆಗಾಗಿ ಕೇರಳಕ್ಕೆ ಬಂದಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಆಲತ್ತೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕುನ್ನಂಕುಳಂನಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ಆಡಳಿತಾರೂಢ ಎಡರಂಗವು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ದೂರಿದರು.

‘ಬಡವರು, ಕೂಲಿಕಾರ್ಮಿಕರು, ಮಹಿಳೆಯರು ಮತ್ತು ವಿದೇಶಗಳಿಂದ ಮರಳಿ ಬಂದವರು ಕೇರಳದ 300 ರಷ್ಟು ಸಹಕಾರಿ ಬ್ಯಾಂಕ್‌ಗಳಲ್ಲಿ ಸುಮಾರು ₹ 1 ಲಕ್ಷ ಕೋಟಿ ಮೊತ್ತವನ್ನು ಠೇವಣಿಯಾಗಿ ಇಟ್ಟಿದ್ದಾರೆ. ಸಿಪಿಎಂ ಭ್ರಷ್ಟಾಚಾರದಿಂದ ಆ ಹಣಕ್ಕೆ ಕಂಟಕ ಎದುರಾಗಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ಮಧ್ಯೆ ಒಳ ಒಪ್ಪಂದ ನಡೆದಿದೆ’ ಎಂದು ಪ್ರಧಾನಿ ಟೀಕಿಸಿದರು. 

ವಯನಾಡ್‌ನಲ್ಲಿ ರಾಹುಲ್‌ ಗಾಂಧಿ ರೋಡ್‌ ಶೋ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.