ADVERTISEMENT

ಬಿಹಾರ | ನಕಲಿ ಮದ್ಯ ಸೇವನೆ; ಮೃತರ ಸಂಖ್ಯೆ 35ಕ್ಕೆ ಏರಿಕೆ

ಪಿಟಿಐ
Published 18 ಅಕ್ಟೋಬರ್ 2024, 10:09 IST
Last Updated 18 ಅಕ್ಟೋಬರ್ 2024, 10:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಐಸ್ಟೋಕ್‌ ಚಿತ್ರ

ಪಟ್ನಾ: ಬಿಹಾರದ ಸಿವಾನ್‌ ಮತ್ತು ಸಾರಣ್‌ ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. 

ADVERTISEMENT

‘ಶುಕ್ರವಾರ ಮತ್ತೆ 10 ಜನರು ಮೃತಪಟ್ಟಿದ್ದಾರೆ. ಈವರೆಗೆ ಸಿವಾನ್‌ನಲ್ಲಿ 28 ಹಾಗೂ ಸಾರಣ್‌ನಲ್ಲಿ 7 ಜನರು ಸಾವಿಗೀಡಾಗಿದ್ದಾರೆ. ಮದ್ಯ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿರುವ 25 ಜನರಿಗೆ ಎರಡೂ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ’ ಎಂದು ಡಿಐಜಿ ಶುಕ್ರವಾರ ತಿಳಿಸಿದ್ದಾರೆ.

ಬಿಹಾರ ಸರ್ಕಾರ 2016ರ ಏಪ್ರಿಲ್‌ 5ರಂದು ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧ ಜಾರಿಗೊಳಿಸಿತು. ಇದರಿಂದಾಗಿಯೇ ರಾಜ್ಯದಲ್ಲಿ ಅಕ್ರಮವಾಗಿ ನಕಲಿ ಮದ್ಯ ತಯಾರಿಕೆ ಹಾಗೂ ಸೇವನೆಯಿಂದ ಜನರು ಸಾವಿಗೀಡಾಗುತ್ತಿದ್ದಾರೆ. ನಿಷೇಧವು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ವಿಪಕ್ಷಗಳು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರದ ವಿರುದ್ಧ ಹರಿಹಾಯ್ದಿವೆ. 

‘ಪ್ರಕರಣದ ತನಿಖೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ಒಂದು ತಂಡವು ಈಗ ನಡೆದಿರುವ ದುರಂತದ ಕುರಿತು ಸ್ಥಳೀಯ ಮಟ್ಟದಲ್ಲಿ ಸಂಪೂರ್ಣವಾಗಿ ತನಿಖೆ ನಡೆಸಲಿದೆ. ಪಟ್ನಾದಲ್ಲಿ ಸಂಬಂಧಪಟ್ಟ ಇಲಾಖೆಯು ಇನ್ನೊಂದು ತಂಡವನ್ನು ರಚಿಸಿದ್ದು, ಅದು ಇತ್ತೀಚೆಗೆ ನಡೆದ ಇಂತಹ ಎಲ್ಲಾ ಘಟನೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲಿದೆ’ ಎಂದು ಡಿಜಿಪಿ ಅಲೋಕ್ ರಾಜ್‌ ತಿಳಿಸಿದ್ದಾರೆ. 

15 ಜನರ ಬಂಧನ: ದುರಂತಕ್ಕೆ ಸಂಬಂಧಿಸಿದಂತೆ ಈವರೆಗೆ 15 ಜನರನ್ನು ಬಂಧಿಸಲಾಗಿದೆ. ಎರಡೂ ಜಿಲ್ಲಾಡಳಿತಗಳು ಮಘರ್‌, ಔರಿಯಾ ಹಾಗೂ ಇಬ್ರಾಹಿಂಪುರದ ಮೂವರು ಚೌಕಿದಾರರನ್ನು ಅಮಾನತುಗೊಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಐವರು ಪೊಲೀಸರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.