ADVERTISEMENT

ವಿಜಯ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆ ಜ. 18ಕ್ಕೆ: ‘ಸುಪ್ರೀಂ’

ಪಿಟಿಐ
Published 30 ನವೆಂಬರ್ 2021, 13:26 IST
Last Updated 30 ನವೆಂಬರ್ 2021, 13:26 IST
ವಿಜಯ್‌ ಮಲ್ಯ
ವಿಜಯ್‌ ಮಲ್ಯ   

ನವದೆಹಲಿ: ಬ್ಯಾಂಕ್‌ಗಳಿಂದ ₹9,000 ಕೋಟಿಗೂ ಹೆಚ್ಚು ಸಾಲ ಪಡೆದು, ಪರಾರಿಯಾಗಿರುವ ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ ಮಾಲೀಕ ವಿಜಯ್‌ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಮುಂದಿನ ವರ್ಷದ ಜನವರಿ 18ರಂದು ನಡೆಸುವುದಾಗಿ ಸುಪ್ರಿಂ ಕೋರ್ಟ್‌ ಮಂಗಳವಾರ ತಿಳಿಸಿದೆ.

ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2017ರಿಂದ ಸಾಕಷ್ಟು ಸಮಯ ಕಾದಿದೆ. ಇನ್ನೂ ಹೆಚ್ಚಿನ ಅವಧಿ ಕಾಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಯು.ಯು ಲಲಿತ್, ಎಸ್‌.ಆರ್‌. ಭಟ್‌, ಬೇಲಾ ಎಂ. ತ್ರಿವೇದಿ ಅವರ ಪೀಠ ತಿಳಿಸಿದೆ.

‘ಮಲ್ಯ ಅವರು ದಾಖಲೆಗಳನ್ನು ಮುಂಗಡವಾಗಿ ಸಲ್ಲಿಸಲು ಮುಕ್ತರಾಗಿದ್ದಾರೆ. ಒಂದು ವೇಳೆ ಅವರಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ ಅವರ ಪರವಾಗಿ ವಕೀಲರು ದಾಖಲೆಗಳನ್ನು ಸಲ್ಲಿಸಬಹುದು’ ಎಂದು ಪೀಠ ಹೇಳಿದೆ.

ADVERTISEMENT

‌ಈ ವಿಚಾರದಲ್ಲಿ ಅಮಿಕಸ್ ಕ್ಯೂರಿಯಾಗಿ ಸಹಾಯ ಮಾಡುವಂತೆ ಹಿರಿಯ ವಕೀಲ ಜೈದೀಪ್ ಗುಪ್ತಾ ಅವರಿಗೆ ಸುಪ್ರೀಂ ಕೋರ್ಟ್ ಮನವಿ ಮಾಡಿತು.

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತನ್ನ ಮಕ್ಕಳಿಗೆ 40 ದಶಲಕ್ಷ ಡಾಲರ್‌ ವರ್ಗಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2017ರಲ್ಲಿ ಮಲ್ಯ ಅವರನ್ನು ತಪ್ಪಿತಸ್ಥ ಎಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿದ್ದ ಮಲ್ಯ ಅವರ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಮಲ್ಯ ಅವರು 2016ರ ಮಾರ್ಚ್‌ನಿಂದ ಬ್ರಿಟನ್‌ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.