ನವದೆಹಲಿ: ‘ಸಂವಿಧಾನ ಟೀಕಿಸಿದವರು ಮತ್ತು ಕ್ವಿಟ್ ಇಂಡಿಯಾ ಚಳವಳಿ ವಿರೋಧಿಸಿದ್ದವರನ್ನು ‘ಸೈದ್ಧಾಂತಿಕ ಗುರು’ವಾಗಿ ಒಪ್ಪಿರುವವರೇ ಇಂದು, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪರಂಪರೆಯನ್ನು ತಮ್ಮದಾಗಿಸಿಕೊಳ್ಳಲು ನಿರಂತರವಾಗಿ ಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಪಕ್ಷ ಗುರುವಾರ ತರಾಟೆಗೆ ತೆಗೆದುಕೊಂಡಿದೆ.
‘ಎಕ್ಸ್’ನಲ್ಲಿ ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಪಟೇಲ್ ಅವರು ಕಾಂಗ್ರೆಸ್‌ನ ದಿಗ್ಗಜ. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಮೂರು ವರ್ಷ ಸೆರೆವಾಸ ಅನುಭವಿಸಿದ್ದರು’ ಎಂದು ಸ್ಮರಿಸಿದರು.
ಪಟೇಲ್ ಅವರ ಮೂರ್ತಿಯನ್ನು ಗೋಧ್ರಾದಲ್ಲಿ ಮೊದಲಿಗೆ 1949ರ ಫೆಬ್ರುವರಿ 13ರಂದು ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಉದ್ಘಾಟಿಸಿದ್ದರು. ಪ್ರತಿಮೆ ಜೊತೆಗಿರುವ ನಾಮಫಲಕದಲ್ಲಿ ಈ ವಿವರ ಸ್ಪಷ್ಟವಾಗಿದೆ. ಸ್ಥಳೀಯ ಕಾಂಗ್ರೆಸ್ಸಿಗರು ಪ್ರತಿಮೆ ಸ್ಥಾಪಿಸಿದ್ದರು. ಪಟೇಲ್ ಅವರು ಗೋಧ್ರಾದಲ್ಲಿಯೇ ವಕೀಲಿಕೆ ಶುರು ಮಾಡಿದ್ದರು’ ಎಂದು ಹೇಳಿದ್ದಾರೆ.
ಪಟೇಲ್ ಅವರ ಜನ್ಮದಿನಾರಣೆಯ ದಿನವಾದ ಗುರುವಾರ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಪಕ್ಷದ ಹಲವು ಮುಖಂಡರು ಗೌರವ ಸಲ್ಲಿಸಿದ್ದಾರೆ.
‘ದೇಶದ ಮೊದಲ ಉಪ ಪ್ರಧಾನಿ ಆಗಿದ್ದ ಪಟೇಲ್ ಅವರು ನಮಗೆ ಮಾದರಿ. ಅವರು ಸ್ವತಂತ್ರ ಭಾರತವನ್ನು ಪರಿಪೂರ್ಣ ದೇಶವಾಗಿಸಿದರು’ ಎಂದು ಖರ್ಗೆ ಸ್ಮರಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು, ‘ಪಟೇಲರು ಸಂಘಿಗಳಿಗೆ ಕಡಿವಾಣ ಹಾಕಿದ್ದರು. ಜೀವನವಿಡೀ ಕಾಂಗ್ರೆಸ್ಸಿಗರಾಗಿದ್ದ ಅವರಿಗೆ ಇಂದು ಎಲ್ಲ ಸಂಘಿಗಳು ನಮಿಸುತ್ತಿದ್ದಾರೆ. ಇದೇ ಸಂಘಿಗಳು ಈ ಹಿಂದೆ ಪಟೇಲರ ವಿರುದ್ಧ ಪುಸ್ತಕ ಮುದ್ರಿಸಿ, ಹಂಚಿದ್ದರು’ ಎಂದಿದ್ದಾರೆ.
ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ದೇಶವನ್ನು ಏಕತೆ ಮತ್ತು ಸೌಹಾರ್ದದ ಭಾವದಿಂದ ಪಟೇಲ್ ಒಗ್ಗೂಡಿಸಿದರು ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ತಮ್ಮ ಪೋಸ್ಟ್‌ನಲ್ಲಿ, ‘ಪಟೇಲ್ ಅವರು ಆಧುನಿಕ ಭಾರತದ ಶಿಲ್ಪಿ. ಅವರ ಕೊಡುಗೆಗಳು ದೇಶಕ್ಕೆ ಸಲ್ಲಿಸಿದ ಸೇವೆ, ಬದ್ಧತೆಗೆ ನಿದರ್ಶನ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.