ADVERTISEMENT

ಕಾರಣ ಇಲ್ಲದೆ ಗುತ್ತಿಗೆ ರದ್ದುಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ಪಿಟಿಐ
Published 8 ಮೇ 2024, 13:18 IST
Last Updated 8 ಮೇ 2024, 13:18 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಖಾಸಗಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ವಹಿಸುವ ಗುತ್ತಿಗೆಗಳನ್ನು ಕಾರಣ ನೀಡದೆಯೇ ರದ್ದುಪಡಿಸುವಂತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಕಲ್ಕತ್ತ ಹೈಕೋರ್ಟ್‌ನ ಆದೇಶವೊಂದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ.

ಗುತ್ತಿಗೆಯೊಂದನ್ನು ಪಡೆದ ನಂತರ ಅದಕ್ಕಾಗಿ ಹೂಡಿಕೆ ಮಾಡುವ ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಅದರಿಂದ ಒಂದಿಷ್ಟು ಲಾಭ ಮಾಡಿಕೊಳ್ಳಬಹುದು ಎಂಬ ಸಕಾರಣದ ನಿರೀಕ್ಷೆ ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ತ್ರಿಸದಸ್ಯ ಪೀಠವು ಹೇಳಿದೆ.

‘ಕಾರಣ ನೀಡದೆಯೇ ಒಂದು ಗುತ್ತಿಗೆಯನ್ನು ರದ್ದು ಮಾಡುವುದು ಹೇಗೆ? ಗುತ್ತಿಗೆಯನ್ನು ಪಡೆದ ನಂತರ ಅದನ್ನು ಕಾರ್ಯರೂಪಕ್ಕೆ ತರಲು ಖಾಸಗಿ ವ್ಯಕ್ತಿಯು ಹೂಡಿಕೆ ಮಾಡಿರುತ್ತಾನೆ’ ಎಂದು ಸಿಜೆಐ ಚಂದ್ರಚೂಡ್ ಹೇಳಿದರು. ಪೀಠದ ಎದುರು ಇದ್ದ ಪ್ರಕರಣವನ್ನು ಉಲ್ಲೇಖಿಸಿ ಅವರು, ಈ ಪ್ರಕರಣದಲ್ಲಿ ಗುತ್ತಿಗೆ ರದ್ದು ಮಾಡಿದ್ದಕ್ಕೆ ಯಾವ ಕಾರಣವನ್ನೂ ನೀಡಿರಲಿಲ್ಲ ಎಂದು ಹೇಳಿದರು.

ADVERTISEMENT

ಸುಬೋಧ್ ಕುಮಾರ್ ಸಿಂಗ್ ರಾಥೋರ್ ಎನ್ನುವವರಿಗೆ ಸೇರಿದ ಕಂಪನಿಗೆ ನೀಡಿದ್ದ ಗುತ್ತಿಗೆಯನ್ನು ರದ್ದುಮಾಡಿದ ಕ್ರಮವನ್ನು ಏಕಸದಸ್ಯ ಪೀಠವೊಂದು ಎತ್ತಿಹಿಡಿದಿತ್ತು. ಇದನ್ನು ಹೈಕೋರ್ಟ್‌ನ ವಿಭಾಗೀಯ ಪೀಠವು 2023ರ ಮೇ 25ರಂದು ಮಾನ್ಯ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.