ನವದೆಹಲಿ: ‘ಗಾಜಿಯಾಬಾದ್‌ನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವು ‘ಕಟ್ಟುಕಥೆ’. ಆಸ್ತಿ ವಿವಾದದ ಕಾರಣಕ್ಕೆ ಈ ‘ಪಿತೂರಿ’ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಅತ್ಯಾಚಾರ ಕುರಿತಂತೆ ಮಹಿಳೆ ಹಾಗೂ ಆಕೆಯ ಕುಟುಂಬದ ಸದಸ್ಯರು ವಿರೋಧಾಭಾಸದ ಹೇಳಿಕೆ ನೀಡುತ್ತಿದ್ದಾರೆ ಎಂದು ದೆಹಲಿ ಮಹಿಳಾ ಆಯೋಗ ಶುಕ್ರವಾರ ಹೇಳಿದೆ. ಆದ್ದರಿಂದ,ಅತ್ಯಾಚಾರ ನಡೆದಿದೆಯೋ ಇಲ್ಲವೋ ಎನ್ನುವುದನ್ನು ಅರಿಯಲು ಆಯೋಗವು ಸತ್ಯ ಶೋಧನಾ ಸಮಿತಿಯನ್ನು ರಚಿಸಿದೆ.
‘ಮಹಿಳೆಯೊಂದಿಗೆ ಆಸ್ತಿ ವಿವಾದ ಹೊಂದಿದ್ದ ಐವರನ್ನು ಸಿಲುಕಿಸುವುದಕ್ಕಾಗಿಯೇ ಷಡ್ಯಂತ್ರ ರೂಪಿಸಲಾಗಿದೆ ಎಂದು ಮಹಿಳಾ ಆಯೋಗ ಹೇಳಿದೆ. ಜೊತೆಗೆ, ಅತ್ಯಾಚಾರ ಘಟನೆಯನ್ನು ಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ಪ್ರಸಾರ ಮಾಡಲು ಕೆಲವರಿಗೆ ₹5 ಸಾವಿರ ನೀಡಿರುವ ಕುರಿತು ಸಾಕ್ಷ್ಯ ಸಿಕ್ಕಿದೆ’ ಎಂದು ಆಯೋಗವು ಹೇಳಿದೆ.
ಮಹಿಳೆಗೆ ಸಹಾಯ ಮಾಡಿರುವ ಆಝಾದ್, ಅಫ್ಜಲ್ ಮತ್ತು ಗೌರವ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯ ಗುಪ್ತಾಂಗದಲ್ಲಿ ಯಾವುದೇ ರೀತಿಯ ವಸ್ತು ಸಿಕ್ಕಿರಲಿಲ್ಲ ಎಂದು ಮಹಿಳೆಯನ್ನು ಪ್ರಥಮವಾಗಿ ಪರೀಕ್ಷಿಸಿದ ಗಾಜಿಯಾಬಾದ್‌ನ ಎಂಎಂಜಿ ಜಿಲ್ಲಾ ಆಸ್ಪತ್ರೆ ಹೇಳಿದೆ. ಜಿಟಿಬಿ ಆಸ್ಪತ್ರೆಯೂ ಇದೇ ರೀತಿಯ ಹೇಳಿಕೆ ನೀಡಿತ್ತು. ಈ ಘಟನೆಯು ನಿರ್ಭಯಾ ಪ್ರಕರಣವನ್ನು ನೆನಪಿಸುತ್ತದೆ ಎಂದು ದೆಹಲಿ ಮಹಿಳಾ ಆಯೋಗವು ಬುಧವಾರ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.