ನವದೆಹಲಿ: ನೇಮಕಾತಿ ರದ್ದಾಗಿರುವ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ನಾಪತ್ತೆಯಾಗಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ ಅವರು ದುಬೈಗೆ ಪರಾರಿಯಾಗಿದ್ದಾರೆ ಎಂದು 'Firstpost' ವೆಬ್‌ಸೈಟ್ ವರದಿ ಮಾಡಿದೆ.
ಖೇಡ್ಕರ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವರು ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದರು ಎಂದು ಹೇಳಿದೆ.
ಇತರ ಹಿಂದುಳಿದ ವರ್ಗ ಹಾಗೂ ಅಂಗವೈಕಲ್ಯ ಕೋಟಾ ಅಡಿ ಮೀಸಲಾತಿ ದುರುಪಯೋಗಪಡಿಸಿಕೊಂಡು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪ ಖೇಡ್ಕರ್ ಮೇಲಿದೆ.
'ಅಧಿಕಾರಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದಕ್ಕಾಗಿ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ನನಗೆ ಬಂಧನದ ಬೆದರಿಕೆ ಇದೆ. ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು' ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಖೇಡ್ಕರ್ ವಿರುದ್ಧದ 'ಆರೋಪಗಳು ಗಂಭೀರ ಸ್ವರೂಪದವುಗಳಾಗಿದ್ದು, ತನಿಖೆ ನಡೆಯಬೇಕಿದೆ' ಎಂದು ಜಾಮೀನು ನಿರಾಕರಿಸಿದೆ.
ಖೇಡ್ಕರ್ ಅವರು ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ ಎಂಬ ಆರೋಪಗಳನ್ನು ಪರಿಗಣಿಸಿ ಅವರ ನೇಮಕಾತಿ ಆದೇಶವನ್ನು ಯುಪಿಎಸ್‌ಸಿ ಬುಧವಾರ ರದ್ದುಗೊಳಿಸಿದೆ. ಅಷ್ಟಲ್ಲದೆ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ನೇಮಕಾತಿಯಿಂದ ಡಿಬಾರ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.