ಮುಂಬೈ: ಮಹಾರಾಷ್ಟ್ರದ ‘ಮಹಾ ವಿಕಾಸ್ ಅಘಾಡಿ (ಎಂವಿಎ)’ ಸರ್ಕಾರವನ್ನು ಮೊದಲು ಸಂಕಷ್ಟಕ್ಕೆ ಸಿಲುಕಿಸಿದ್ದ ವಿವಾದಿತ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಜೂನ್ 30ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.
1988ನೇ ಬ್ಯಾಚ್‌ನ ಅಧಿಕಾರಿಯಾಗಿದ್ದ ಅವರು, ಸುಲಿಗೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದು ಸೇವೆಯಿಂದ ಅಮಾನತುಗೊಂಡಿದ್ದರು.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ಧ ಪರಮ್ ಬೀರ್ ಸಿಂಗ್ ₹100 ಕೋಟಿ ಲಂಚದ ಆರೋಪ ಮಾಡಿದ್ದರು. ಇದು 2021ರ ಮಾರ್ಚ್–ಏಪ್ರಿಲ್ ಅವಧಿಯಲ್ಲಿ ‘ಮಹಾ ವಿಕಾಸ್ ಅಘಾಡಿ’ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.
ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರಿಗೆ ಆಪ್ತರಾಗಿರುವ ದೇಶಮುಖ್ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು. ಬಳಿಕ ಸಿಬಿಐ ಕೂಡ ಅವರನ್ನು ವಶಕ್ಕೆ ಪಡೆದಿತ್ತು. ಸದ್ಯ ಅವರು ಬಂಧನದಲ್ಲಿದ್ದಾರೆ.
ಪ್ರತಿ ತಿಂಗಳೂ ₹100 ಕೋಟಿ ಲಂಚ ಸಂಗ್ರಹಿಸುವಂತೆ ಅಮಾನತುಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಸೂಚಿಸಿದ್ದರು ಎಂದು ಪರಮ್ ಬೀರ್ ಸಿಂಗ್ ಆರೋಪಿಸಿದ್ದರು.
ಈ ಕುರಿತು ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್‌ಸಿಪಿ ವರಿಷ್ಠ ಶರದ್ ಪವಾರ್ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಸಿಂಗ್, ‘ತಿಂಗಳಿಗೆ ₹100 ಕೋಟಿ ಲಂಚ ಸಂಗ್ರಹಿಸುವಂತೆ ಗೃಹ ಸಚಿವರು ಸಚಿನ್ ವಾಜೆ ಅವರಿಗೆ ಗುರಿ ನಿಗದಿಪಡಿಸಿದ್ದರು. ಈ ಗುರಿ ತಲುಪಲು ಸುಮಾರು 1,750 ಬಾರ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಇತರ ಸಂಸ್ಥೆಗಳಿವೆ ಎಂದು ಗೃಹ ಸಚಿವರು ವಾಜೆ ಅವರಿಗೆ ತಿಳಿಸಿದ್ದರು. ಪ್ರತಿಯೊಂದರಿಂದಲೂ ತಲಾ ₹2 – 3 ಲಕ್ಷದಂತೆ ಸಂಗ್ರಹಿಸಿದರೆ ತಿಂಗಳ ಸಂಗ್ರಹ ಸುಮಾರು ₹40 – 50 ಕೋಟಿ ಆಗಬಹುದು. ಬಾಕಿ ಉಳಿದ ಮೊತ್ತ ಇತರ ಮೂಲಗಳಿಂದ ಸಂಗ್ರಹಿಸಬಹುದು ಎಂದು ಸಚಿವರು ಹೇಳಿದ್ದರು’ ಎಂದು ಉಲ್ಲೇಖಿಸಿದ್ದರು.
ಮುಂಬೈ ನಗರ ಪೊಲೀಸ್ ಆಯುಕ್ತರಾಗಿದ್ದ ಸಿಂಗ್ ಅವರು ಗೃಹ ರಕ್ಷಕ ದಳದ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಈ ಆರೋಪ ಮಾಡಿದ್ದರು.
ಬಳಿಕ ಪರಮ್ ಬೀರ್ ಸಿಂಗ್ ವಿರುದ್ಧ ಸುಲಿಗೆ ಆರೋಪ ಕೇಳಿಬಂದಿದ್ದು, ಅವರನ್ನು ಅಮಾನತುಗೊಳಿಸಲಾಗಿತ್ತು.
ಸಂಬಂಧಿತ ಸುದ್ದಿಗಳು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.