ಇಂಪಾಲ: ಸಮೀಪದ ಉದ್ಯಾನವನವೊಂದರಲ್ಲಿ ಇತ್ತೀಚೆಗೆ ಸ್ಥಾಪಿಸಲಾದ ತಮ್ಮ ಪತ್ನಿ, ಬಾಕ್ಸರ್ ಮೇರಿ ಕೋಮ್ ಪ್ರತಿಮೆಯ ನೋಟದ ಬಗ್ಗೆ ಪತಿ ಒನ್ಲರ್ ಕರೋಂಗ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಮಣಿಪುರದಲ್ಲಿ ವಿವಾದ ಸೃಷ್ಟಿಯಾಗಿದೆ.
ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಓನ್ಲರ್ ಕರೋಂಗ್, ‘ಅಲ್ಲಿ ಸ್ಥಾಪಿಸಲಾದ ಪ್ರತಿಮೆಯು ತನ್ನ ಪತ್ನಿಯಂತೆ ಕಾಣುತ್ತಿಲ್ಲ’ ಎಂದು ಹೇಳಿದ್ದಾರೆ.
39 ವರ್ಷದ ಮೇರಿ ಕೋಮ್ ಅವರು ಆರು ಬಾರಿ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗೆದ್ದಿದ್ದು, 2012ರ ಲಂಡನ್ ಒಲಿಂಪಿಕ್‌ನ ಕಂಚಿನ ಪದಕ ವಿಜೇತರಾಗಿದ್ದಾರೆ.
ಮೇರಿ ಕೋಮ್ ಸೇರಿದಂತೆ ರಾಜ್ಯದ ಒಲಿಂಪಿಯನ್‌ಗಳ ಹತ್ತೊಂಬತ್ತು ಪ್ರತಿಮೆಗಳನ್ನು ಇತ್ತೀಚೆಗೆ ಮಣಿಪುರ ಒಲಿಂಪಿಕ್ ಪಾರ್ಕ್‌ನಲ್ಲಿ ಸ್ಥಾಪಿಸಲಾಯಿತು.
ಸತತ ಪ್ರಯತ್ನಗಳ ಹೊರತಾಗಿಯೂ ಓನ್ಲರ್ ಕರೋಂಗ್ ಅಥವಾ ಮೇರಿ ಕೋಮ್ ಅವರನ್ನು ಸಂಪರ್ಕಿಸಲು ಸುದ್ದಿ ಸಂಸ್ಥೆಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ ಮೇರಿ ಕೋಮ್ ಮತ್ತು ಪತಿಯ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಆದಾಗ್ಯೂ, ಪಿಟಿಐ ಜೊತೆ ಮಾತನಾಡಿರುವ ಮೇರಿ ಕೋಮ್ ಸಹೋದರ ಜಿಮ್ಮಿ ಕೋಮ್, ‘ಉದ್ಯಾನದ ಉದ್ಘಾಟನೆಗೆ ಮುನ್ನ ಪ್ರತಿಮೆಯನ್ನು ಬದಲಾಯಿಸುತ್ತೇವೆ ಎಂದು ಮುಖ್ಯಮಂತ್ರಿಗಳ ಕಚೇರಿ ಭರವಸೆ ನೀಡಿದೆ. ಅದರ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ‘ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.