ADVERTISEMENT

ಚಂದ್ರಶೇಖರನ್‌ ಹತ್ಯೆ ಅಪರಾಧಿಗಳಿಗೆ ಕ್ಷಮಾದಾನ ಇಲ್ಲ: ಕೇರಳ ಸರ್ಕಾರ

ಪಿಟಿಐ
Published 27 ಜೂನ್ 2024, 14:30 IST
Last Updated 27 ಜೂನ್ 2024, 14:30 IST
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್   

ತಿರುವನಂತಪುರ: ದೇಶದ ಗಮನಸೆಳೆದಿದ್ದ ಟಿ.ಪಿ.ಚಂದ್ರಶೇಖರನ್‌ ಹತ್ಯೆ ಪ್ರಕರಣದ ಅಪರಾಧಿಗಳಿಗೆ ಯಾವುದೇ ಕಾರಣಕ್ಕೂ ಕ್ಷಮಾದಾನ ನೀಡುವುದಿಲ್ಲ ಎಂದು ಕೇರಳ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.  

ಅಲ್ಲದೇ, ಈ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮೂವರ ಹೆಸರುಗಳನ್ನು ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆ ಮಾಡಲಿರುವ ಕೈದಿಗಳ ಪಟ್ಟಿಯಲ್ಲಿ ಸೇರಿಸಿರುವ ಆರೋಪದಲ್ಲಿ ಮೂವರು ಜೈಲು ಅಧಿಕಾರಿಗಳನ್ನೂ ಸರ್ಕಾರ ಗುರುವಾರ ಅಮಾನತು ಮಾಡಿದೆ. 

ಈ ವಿಚಾರವನ್ನು ಇಟ್ಟುಕೊಂಡು ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ಎಡ ಪಕ್ಷದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಈ ಪ್ರಕ್ರಿಯೆಯಲ್ಲಿ ಸರ್ಕಾರ ಶಾಮೀಲಾಗಿದೆ ಎಂದು ಆರೋಪಿಸಿವೆ. 

ADVERTISEMENT

ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್‌ ಅವರು ಸದನದಲ್ಲಿ ಮಂಡಿಸಿದ ವಿಚಾರಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪರವಾಗಿ ಗೃಹ ಸಚಿವ ಎಂ.ಬಿ.ರಾಜೇಶ್ ಅವರು, ‘ಕ್ಷಮಾದಾನ ನೀಡುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು.  

‘ಸದನದ ಗಮನಕ್ಕೆ ತಾರದೆ, ನಿಯಮಗಳನ್ನು ಉಲ್ಲಂಘಿಸಿ ಸರ್ಕಾರವು ಶಿಕ್ಷಿತರಿಗೆ ಕ್ಷಮಾದಾನ ನೀಡಲು ಯತ್ನಿಸುತ್ತಿದೆ’ ಎಂದು ಸತೀಶನ್‌ ಆರೋಪಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಜೇಶ್‌, ‘ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ರಾಜ್ಯದ ವಿವಿಧ ಜೈಲುಗಳಲ್ಲಿರುವ ಕೆಲವು ಕೈದಿಗಳ ಶಿಕ್ಷೆಯನ್ನು ಕಡಿಮೆ ಮಾಡಿ, ಸನ್ನಡತೆಯ ಆಧಾರದಲ್ಲಿ ಅವರನ್ನು ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದೆ’ ಎಂದು ಹೇಳಿದರು. 

‘ಅದರಂತೆ ಸರ್ಕಾರ 2022ರಲ್ಲಿ ಹೊರಡಿಸಿರುವ ಆದೇಶದ ಅನ್ವಯ, ಮಾನದಂಡಗಳನ್ನು ಅನುಸರಿಸಿ ಕಾರಾಗೃಹ ವಿಭಾಗದ ಮುಖ್ಯಸ್ಥರು ಸಿದ್ಧಪಡಿಸಿದ ಕೈದಿಗಳ ಪಟ್ಟಿಯನ್ನು ಪರಿಗಣಿಸಲಾಗುತ್ತದೆ. ಕೆಲವು ಅನರ್ಹರ ಹೆಸರುಗಳೂ ಪಟ್ಟಿಯಲ್ಲಿ ಇದ್ದುದರಿಂದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಕಾರಾಗೃಹ ಇಲಾಖೆಯ ಮುಖ್ಯಸ್ಥರಿಗೆ ನಿಯಮಗಳನ್ನು ಪಾಲಿಸಿ ಪರಿಷ್ಕೃತ ಪಟ್ಟಿ ನೀಡುವಂತೆ ಜೂನ್‌ 3ರಂದು ಸೂಚಿಸಿದ್ದಾರೆ’ ಎಂದು ವಿವರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.