ದಿಸ್‍ಪುರ್: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಇಲಿ ಭಕ್ಷ್ಯಕ್ಕೆ ಭಾರೀ ಬೇಡಿಕೆಯಿದೆ. ಆಗ ತಾನೇ ಸೆರೆ ಹಿಡಿದ ಇಲಿಗಳ ಮಾಂಸ ಇಲ್ಲಿನ ಜನರ ಫೇವರಿಟ್ ಭಕ್ಷ್ಯವಾಗಿದೆ.
ಇಲ್ಲಿನ ಕುಮಾರಿಕಟಾದಲ್ಲಿರುವ ಭಾನುವಾರ ಸಂತೆಯಲ್ಲಿ ಕೋಳಿಮಾಂಸ ಮತ್ತು ಹಂದಿಮಾಂಸಕ್ಕಿಂತಬೇಯಿಸಿದ, ಚರ್ಮ ಸಹಿತ ಮತ್ತು ಖಾರದ ಇಲಿ ಮಾಂಸಗಳನ್ನು ಜನರು ಮುಗಿಬಿದ್ದು ಖರೀದಿಸುತ್ತಾರೆ.
ಹೊಲ, ಗದ್ದೆಗಳನ್ನು ನಾಶ ಮಾಡುತ್ತಿರುವ ಇಲಿಗಳನ್ನು ರೈತರು ಹಿಡಿದು ತಂದು ಅಂಗಡಿಗಳಿಗೆ ಮಾರುತ್ತಾರೆ. ರೋಸ್ಟ್ ಮಾಡಿದ ಇಲಿ ಮಾಂಸ ಇಲ್ಲಿನ ಜನರಿಗೆ ಅಚ್ಚುಮೆಚ್ಚು ಅಂತೆ!
ಅಸ್ಸಾಂನ ಟೀ ತೋಟದಲ್ಲಿ ದುಡಿಯುವ ಬುಡಕಟ್ಟು ವಿಭಾಗದ ಆದಿವಾಸಿ ಜನರಿಗೆ ಇಲಿ ಈಗ ಆದಾಯದ ಮೂಲವಾಗಿದೆ. ಚಹಾ ತೋಟದಲ್ಲಿ ದುಡಿಯುವ ಈ ಕೆಲಸಗಾರರಿಗೆ ಚಳಿಗಾಲದಲ್ಲಿ ಕೆಲಸ ಕಮ್ಮಿ. ಹಾಗಾಗಿಅವರು ಭತ್ತದ ಗದ್ದೆಗಳಿಗೆ ಹೋಗಿ, ಅಲ್ಲಿಂದ ಇಲಿ ಹಿಡಿದು ತಂದು ಮಾರುಕಟ್ಟೆಗೆ ಮಾರುತ್ತಾರೆ.
ಒಂದು ಕೆ.ಜಿ ಇಲಿ ಮಾಂಸ ₹200ಗೆ ಮಾರಾಟವಾಗುತ್ತದೆ.ಇಲ್ಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ಇಲಿಗಳ ಸಂಖ್ಯೆ ಜಾಸ್ತಿಯಾಗಿದೆ ಅಂತಾರೆ ರೈತರು.
ಭತ್ತದ ಗದ್ದೆಯಲ್ಲಿ ನಾವು ಇಲಿಬೋನು ಇಟ್ಟು ಇಲಿಗಳನ್ನು ಹಿಡಿಯುತ್ತೇವೆ ಎಂದು ಎಎಫ್‍ಪಿ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಇಲಿ ಮಾರಾಟಗಾರ ಸಂಬಾ ಸೊರೇನ್ ಹೇಳಿದ್ದಾರೆ. ರಾತ್ರಿ ಹೊತ್ತಿನಲ್ಲಿ ಬಿದಿರಿನಿಂದ ಮಾಡಿದ ಇಲಿ ಬೋನು ಬಳಸಿ ಇಲಿಗಳನ್ನು ಹಿಡಿಯಲಾಗುತ್ತದೆ.
ಕೆಲವೊಂದು ಇಲಿಗಳು ಒಂದು ಕೆಜಿಗಿಂತ ಜಾಸ್ತಿ ತೂಗುತ್ತಿದ್ದು ಒಂದು ರಾತ್ರಿಯಲ್ಲಿ 10-20 ಕೆಜಿ ಇಲಿಗಳನ್ನು ಹಿಡಿಯುತ್ತಾರೆ ಎಂದು ಮಾರಾಟಗಾರರೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.