ADVERTISEMENT

ತ್ರಿಪುರಾ: ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯಿಂದ ಹಲ್ಲೆ, ಐವರ ಸಾವು

ಪಿಟಿಐ
Published 27 ನವೆಂಬರ್ 2021, 10:37 IST
Last Updated 27 ನವೆಂಬರ್ 2021, 10:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಗರ್ತಲಾ: ತ್ರಿಪುರಾದ ಖೋವಾಯ್‌ ಜಿಲ್ಲೆಯಲ್ಲಿ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ ಪರಿಣಾಮ ಪೊಲೀಸ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಐವರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.

‘ಶೇವ್ರಾತಲಿ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಪ್ರದೀಪ್‌ ದೇವರಾಯ್ ಎಂಬುವವರು, ತನ್ನ ಇಬ್ಬರು ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳು ಹಾಗೂ ತಮ್ಮನ ಮೇಲೆ ಏಕಾಏಕಿ ಕಬ್ಬಿಣದ ಸರಳಿನಿಂದ ಹಲ್ಲೆ ಮಾಡಿದ್ದಾರೆ. ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಎಎಸ್‌ಪಿ ರಾಜೀವ್‌ ಸೇನ್‌ಗುಪ್ತ ತಿಳಿಸಿದ್ದಾರೆ.

‘ಪತ್ನಿ ಮೇಲೆಯೂ ಪ್ರದೀಪ್‌ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಆತ, ಆಟೊವೊಂದನ್ನು ನಿಲ್ಲಿಸಿ, ಚಾಲಕ ಹಾಗೂ ಆತನ ಪುತ್ರನ ಮೇಲೆ ಹಲ್ಲೆ ನಡೆಸಿದ. ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪುತ್ರ ಗಂಭೀರವಾಗಿ ಗಾಯಗೊಂಡಿದ್ದಾನೆ’ ಎಂದು ತಿಳಿಸಿದ್ದಾರೆ.

ADVERTISEMENT

ವಿಷಯ ತಿಳಿದ ನಂತರ ಪೊಲೀಸ್‌ ಇನ್ಸ್‌ಪೆಕ್ಟರ್‌ ಸತ್ಯಜಿತ್‌ ಮಲಿಕ್‌ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತು. ಆಗ ದೇವರಾಯ್‌ಪೊಲೀಸ್‌ ಇನ್ಸ್‌ಪೆಕ್ಟರ್‌ ಮಲಿಕ್‌ ಮೇಲೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಲಿಕ್‌ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟರು ಎಂದು ಸೇನ್‌ಗುಪ್ತ ತಿಳಿಸಿದ್ದಾರೆ.

‘ದೇವರಾಯ್ ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಆತನನ್ನು ಬಂಧಿಸಲಾಗಿದೆ’ ಎಂದು ಎಸ್‌ಪಿ ಕಿರಣ್‌ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.