ಜೈಪುರ: ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತಂದೆ ಮೋತಿಲಾಲ್ ನೆಹರೂ ಅವರನ್ನು ಅಣಕಿಸಿ ಫೇಸ್‌ಬುಕ್‌ನಲ್ಲಿ ಸಂದೇಶ ಹಾಕಿದ್ದ ಆರೋಪದಡಿ ರೂಪದರ್ಶಿ, ಹಿಂದಿ ರಿಯಾಲಿಟಿ ಷೋ ಬಿಗ್ ಬಾಸ್ ಖ್ಯಾತಿಯ ಪಾಯಲ್ ರೋಹ್ಟಗಿ ಅವರನ್ನು ರಾಜಸ್ಥಾನ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಪಾಯಲ್ ವಿರುದ್ಧ ಬುಂಡಿ ಜಿಲ್ಲಾ ಕೇಂದ್ರದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇಲ್ನೋಟಕ್ಕೆ ತಪ್ಪಿತಸ್ಥೆ ಎಂದು ಕಂಡುಬಂದ ಕಾರಣ ಬಂಧಿಸಲಾಗಿದೆ ಎಂದು ಬುಂಡಿಯ ಪೊಲೀಸ್ ವರಿಷ್ಠಾಧಿಕಾರಿ ಮಮತಾ ಗುಪ್ತಾ ತಿಳಿಸಿದರು. ಪೊಲೀಸರ ತಂಡ ಮೊದಲು ಮುಂಬೈಗೆ ತೆರಳಿತ್ತು. ಪಾಯಲ್ ಪೋಷಕರ ಜೊತೆ ಅಹಮದಾಬಾದ್‌ನಲ್ಲಿ ಇರುವುದಾಗಿ ತಿಳಿಯಿತು. ಅಲ್ಲಿಗೆ ತೆರಳಿ ಅವರನ್ನು ಬಂಧಿಸಲಾಯಿತು ಎಂದು ತಿಳಿಸಿದರು.
ಪಾಯಲ್ ವಿರುದ್ಧ ಐಟಿ ಕಾಯ್ದೆ ವಿಧಿ 67 (ವಿದ್ಯುನ್ಮಾನ ಮಾಧ್ಯಮದಲ್ಲಿ ಆಕ್ಷೇಪಾರ್ಹ ಮಾಹಿತಿ ಪ್ರಕಟಣೆ), ವಿಧಿ 504 (ಅಪಮಾನಿಸುವ ಮತ್ತು ಶಾಂತಿಗೆ ಭಂಗ ಉಂಟು ಮಾಡುವ ಉದ್ದೇಶ) ಮತ್ತು ಐಪಿಸಿ ವಿಧಿ 505 (ವದಂತಿಗಳ ಪ್ರಚಾರ) ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ. ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಹರಿದಾಡಿದ್ದ ವಿಡಿಯೊದಲ್ಲಿ ಪಾಯಲ್ ಅವರು, ‘ಮೋತಿಲಾಲ್ ನೆಹರೂ ಅವರು ಜವಹರಲಾಲ್ ನೆಹರೂ ಅವರ ನಿಜವಾದ ತಂದೆಯಲ್ಲ’ ಎಂದು ಹೇಳಿದ್ದರು ಎಂದು ಆರೋಪಿಸಲಾಗಿದೆ.
ಬಂಧನದ ವಿಷಯವನ್ನು ಪಾಯಲ್ ಸ್ವತಃ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಗೂಗಲ್‌ನಿಂದ ಮಾಹಿತಿಯನ್ನು ಪಡೆದುಕೊಂಡಿದ್ದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ತಮಾಷೆ’ ಎಂದು ಬರೆದಿದ್ದಾರೆ.
ಆಕ್ಷೇಪಾರ್ಹ ವಿಡಿಯೊ ಪೋಸ್ಟ್ ಮಾಡಿದ್ದಾರೆ ಎಂದು ರಾಜಸ್ಥಾನ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚರ್ಮೇಶ್ ಶರ್ಮಾ ದೂರು ನೀಡಿದ್ದರು.
ಪಾಯಲ್ ರೋಹ್ಟಗಿ ಬಂಧಿಸಿರುವುದಕ್ಕೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ‘ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ದ್ವಿಮುಖ ನೀತಿಯನ್ನು ಇದು ಎತ್ತಿ ತೋರಿಸಿದೆ’ ಎಂದು ರಾಜಸ್ಥಾನ ಬಿಜೆಪಿ ವಕ್ತಾರ ಲಕ್ಷ್ಮಿಕಾಂತ್ ಭರದ್ವಾಜ್ ಅವರು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.