ADVERTISEMENT

ಕೊರೊನಾ: ಬಿರುಸಾದ ತಡೆ ಯತ್ನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 20:20 IST
Last Updated 13 ಮಾರ್ಚ್ 2020, 20:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ನವದೆಹಲಿ:ವಿದೇಶಿಯರಿಗೆ ಭಾರತ ಪ್ರವೇಶದ ಬಾಗಿಲನ್ನು ಶುಕ್ರವಾರ ಬಹುತೇಕ ಮುಚ್ಚಲಾಗಿದೆ. ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಪ್ರಯತ್ನ ಇನ್ನಷ್ಟು ಬಿರುಸು ಪಡೆದಿದೆ. ಇಟಲಿಯಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸಂಪರ್ಕಿಸುವ ಕೆಲಸ ಆರಂಭವಾಗಿದೆ.

ಭಾರತೀಯ ಪ್ರಜೆಗಳ ಮಾದರಿಗಳನ್ನು ಸಂಗ್ರಹಿಸುವುದಕ್ಕಾಗಿ ವೈದ್ಯಕೀಯ ತಂಡವೊಂದು ಶುಕ್ರವಾರ ರೋಮ್‌ ತಲುಪಿದೆ. ರೋಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಮಿಲಾನ್‌ನಲ್ಲಿರುವ ಭಾರತದ ಕಾನ್ಸಲ್‌ ಜನರಲ್‌ ಸಮನ್ವಯದಲ್ಲಿ ಭಾರತೀಯರನ್ನು ಕರೆತರುವ ಕಾರ್ಯಾಚರಣೆ ನಡೆಯಲಿದೆ. ಕೊರೊನಾ ವೈರಸ್‌ ಸೋಂಕು ಇಲ್ಲದವರನ್ನು ತಕ್ಷಣವೇ ಕರೆತರಲು ಪ್ರಯತ್ನಗಳು ನಡೆಯುತ್ತಿವೆ.

ಕೊರೊನಾಕ್ಕೆ ಸಂಬಂಧಿಸಿ, ಚೀನಾದ ಬಳಿಕ ಅತಿ ಹೆಚ್ಚು ತೊಂದರೆ ಅನುಭವಿಸಿರುವ ಇಟಲಿಯಲ್ಲಿರುವ ಭಾರತೀಯರು ‘ಕೋವಿಡ್‌–19 ಪೀಡಿತರಲ್ಲ’ ಎಂಬ ಪ್ರಮಾಣಪತ್ರ ಪಡೆಯುವುದು ಕಷ್ಟವಾಗುತ್ತಿದೆ. ಹಾಗಾಗಿ, ಭಾರತದ ವೈದ್ಯಕೀಯ ತಂಡವನ್ನು ಅಲ್ಲಿಗೆ ಕಳುಹಿಸಲಾಗಿದೆ. ಇಟಲಿ ಮತ್ತು ದಕ್ಷಿಣ ಕೊರಿಯಾದಿಂದ ಭಾರತೀಯರು ಹಿಂದಿರುಗಬೇಕಾದರೆ ಇಂತಹ ಪ್ರಮಾಣಪತ್ರ ಕಡ್ಡಾಯ ಎಂಬ ನಿಯಮವನ್ನು ಸರ್ಕಾರ ಇತ್ತೀಚೆಗೆ ರೂಪಿಸಿದೆ.

ADVERTISEMENT

ರಾಜತಾಂತ್ರಿಕ, ಉದ್ಯೋಗ ಮತ್ತು ಕೆಲವು ವರ್ಗಗಳ ವೀಸಾ ಬಿಟ್ಟು, ಉಳಿದೆಲ್ಲ ವೀಸಾಗಳನ್ನು ಸರ್ಕಾರ ಅಮಾನತು ಮಾಡಿದೆ. ಅದು ಶುಕ್ರವಾರ ಸಂಜೆ 5.30ರಿಂದ ಜಾರಿಗೆ ಬಂದಿದೆ. ಚೀನಾ, ಇಟಲಿ, ಇರಾನ್‌, ದಕ್ಷಿಣ ಕೊರಿಯಾ, ಫ್ರಾನ್ಸ್‌, ಸ್ಪೇನ್‌ ಮತ್ತು ಜರ್ಮನಿಯಿಂದ ಬರುವ ಎಲ್ಲ ಪ್ರಯಾಣಿಕರನ್ನು ಕನಿಷ್ಠ 14 ದಿನ ಪ್ರತ್ಯೇಕಿಸಲಾದ ಘಟಕದಲ್ಲಿ ಇರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ನಮಸ್ತೆ ಮೊರೆ ಹೋದ ಜಗತ್ತು
ಕೊರೊನಾ ವೈರಸ್‌ ಹರಡುವಿಕೆ ತಡೆಯುವುದಕ್ಕಾಗಿ ಹೆಚ್ಚು ಹೆಚ್ಚು ಜನರು ಈಗ ಕೈಕುಲುಕುವ ಬದಲು ‘ನಮಸ್ತೆ’ ಎಂದು ಕೈಮುಗಿಯುತ್ತಿದ್ದಾರೆ.

ನಮಸ್ತೆ ಎಂದು ಶುಭಾಶಯ ವಿನಿಮಯ ಮಾಡುವುದಕ್ಕೆ ಒತ್ತು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದರು. ಜಾಗತಿಕ ನಾಯಕರೂ ಸೇರಿ ಹಲವರು ಇದನ್ನು ಈಗ ಅನುಸರಿಸುತ್ತಿದ್ದಾರೆ.

ಕೈಕುಲುಕುವುದು, ಅಪ್ಪುಗೆ ಮತ್ತು ಕೆನ್ನೆಗೆ ಮುತ್ತಿಟ್ಟು ಶುಭಾಶಯ ಹೇಳಿದರೆ ಕೊರೊನಾ ವೈರಸ್‌ ಹರಡಬಹುದು ಎಂಬ ಆತಂಕ ಈಗ ಜನರಲ್ಲಿ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ರಾಜಕುಮಾರ ಚಾರ್ಲ್ಸ್‌ ಅವರು ಕೈಕುಲುಕುವ ಬದಲಿಗೆ ನಮಸ್ತೆ ಎಂದ ವಿಡಿಯೊ ಜಾಲತಾಣಗಳಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು.

ಸಾರ್ಕ್‌ ಕಾರ್ಯತಂತ್ರಕ್ಕೆ ಮೋದಿ ಕರೆ
ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್‌ನ ಸದಸ್ಯರಾದ ಎಂಟು ದೇಶಗಳ ನಾಯಕರ ಜತೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶುಕ್ರವಾರ ಚರ್ಚೆ ನಡೆಸಿದರು.

‘ಕೊರೊನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಪ್ರಬಲವಾದ ಕಾರ್ಯತಂತ್ರವನ್ನು ಸಾರ್ಕ್‌ ದೇಶಗಳ ನಾಯಕರು ರೂಪಿಸಬೇಕು ಎಂಬ ವಿಚಾರವನ್ನು ಮುಂದಿಟ್ಟಿದ್ದೇನೆ’ ಎಂದು ಮೋದಿ ಅವರು ಟ್ವೀಟ್‌ ಮಾಡಿದ್ದಾರೆ. ‘ನಮ್ಮ ಜನರನ್ನು ಆರೋಗ್ಯವಾಗಿ ಇರಿಸುವ ಬಗ್ಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಾವು ಚರ್ಚಿಸಬಹುದು. ನಾವೆಲ್ಲ ಜತೆಯಾಗಿ ಇಡೀ ಜಗತ್ತಿಗೆ ಮಾದರಿಯೊಂದನ್ನು ಸೃಷ್ಟಿಸಬಹುದು, ಆರೋಗ್ಯಕರ ಜಗತ್ತು ರೂಪಿಸಲು ಕೊಡುಗೆ ನೀಡಬಹುದು’ ಎಂದೂ ಮೋದಿ ಹೇಳಿದ್ದಾರೆ.

ಭೂತಾನ್‌ ಪ್ರಧಾನಿ ಲೋತಾಯ್‌ ಶೆರಿಂಗ್‌, ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ, ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮತ್ತು ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್‌ ಸಾಲಿಹ್‌ ಅವರು ಮೋದಿ ಪ್ರಸ್ತಾವವನ್ನು ಬೆಂಬಲಿಸಿದ್ದಾರೆ. ಅಫ್ಗಾನಿಸ್ತಾನ ಅಧ್ಯಕ್ಷರ ವಕ್ತಾರರು ಕೂಡ ಈ ಪ್ರಸ್ತಾವವನ್ನು ಸ್ವಾಗತಿಸಿದ್ದಾರೆ.

ಮೋದಿ ಅವರ ವಿಡಿಯೊ ಕಾನ್ಫರೆನ್ಸ್‌ ಹಿಂದೆ ರಾಜತಾಂತ್ರಿಕ ಉದ್ದೇಶವೂ ಇದೆ. ದಕ್ಷಿಣ ಏಷ್ಯಾದಲ್ಲಿ ಭಾರತದ ನಾಯಕತ್ವವನ್ನು ಗಟ್ಟಿಗೊಳಿಸುವುದು, ಸಾರ್ಕ್‌ಗೆ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ) ಭಾರತದ ಬದ್ಧತೆಯನ್ನು ಮತ್ತೊಮ್ಮೆ ಸಾರುವುದು ಮೋದಿ ಅವರ ಗುರಿ. 2016ರ ಬಳಿಕ ಸಾರ್ಕ್‌ ಸ್ತಬ್ಧವಾಗಲು ಭಾರತವೇ ಕಾರಣ ಎಂಬ ಪಾಕಿಸ್ತಾನದ ಆರೋಪಕ್ಕೆ ಉತ್ತರ ನೀಡುವ ಉದ್ದೇಶವೂ ಇದೆ.

ಮೋದಿ ಅವರ ಪ್ರಸ್ತಾವಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಶುಕ್ರವಾರ ರಾತ್ರಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಒಬ್ಬನಿಗೆ ಸೋಂಕು, 700 ಮಂದಿ ಮೇಲೆ ನಿಗಾ
ನೊಯಿಡಾ(ಪಿಟಿಐ):
ಗ್ರೇಟರ್‌ ನೊಯಿಡಾದಲ್ಲಿ ಚರ್ಮದ ಉತ್ಪನ್ನಗಳನ್ನು ತಯಾರಿಸುವ ಕಂಪನಿಯ ನಿರ್ದೇಶಕರೊಬ್ಬರಿಗೆ ಕೋವಿಡ್‌–19 ದೃಢಪಟ್ಟ ಪರಿಣಾಮ 700ಕ್ಕೂ ಹೆಚ್ಚು ಮಂದಿ ಮೇಲೆ ನಿಗಾವಹಿಸಲಾಗಿದೆ.

ದೆಹಲಿಯಲ್ಲಿ ವಾಸಿಸುವ ಈ ನಿರ್ದೇಶಕರು ಇತ್ತೀಚೆಗೆ ಇಟಲಿ, ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದರು. ತವರಿಗೆ ವಾಪಸ್‌ ಆದ ಬಳಿಕ ಅನಾರೋಗ್ಯ ಕಾಣಿಸಿಕೊಂಡಾಗ ಪರೀಕ್ಷೆಗೆ ಒಳಪಡಿಸಿದಾಗ ವೈರಸ್‌ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿತ್ತು. ಹೀಗಾಗಿ, ಕಂಪನಿಯ 707 ಮಂದಿ ಮೇಲೆ ನಿಗಾವಹಿಸಲಾಗಿದೆ.

ದೇಶದಲ್ಲಿ ಸದ್ಯ 1 ಲಕ್ಷ ಪರೀಕ್ಷೆ ಕಿಟ್‌ಗಳಿವೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಿಟ್‌ಗಳನ್ನು ಖರೀದಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವೈರಸ್‌ ಭೀತಿ: ಅಘೋಷಿತ ಬಂದ್‌
* ಮಾರ್ಚ್‌ 22ರವರೆಗೆ ಎಲ್ಲ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿದ ಉತ್ತರ ಪ್ರದೇಶ ಸರ್ಕಾರ

* ವಿಶ್ವವಿದ್ಯಾಲಯಗಳಿಗೆ ಮಾರ್ಚ್‌ 31ರವರೆಗೆ ರಜೆ ಘೋಷಿಸಿದ ಹರಿಯಾಣ ಮತ್ತು ಪಂಜಾಬ್‌ ಸರ್ಕಾರ

* ವೈರಸ್‌ ಹಬ್ಬದಂತೆ ತಡೆಯಲು ಭಾರತ ಮತ್ತು ನೇಪಾಳ ಗಡಿ ಪ್ರದೇಶ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ.

* ಭಾರತ–ಬಾಂಗ್ಲಾದೇಶ ಗಡಿಯಲ್ಲಿ ರೈಲು ಮತ್ತು ಬಸ್‌ಗಳ ಸಂಚಾರ ಏಪ್ರಿಲ್‌ 15ರವರೆಗೆ ಸ್ಥಗಿತ

* ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಸರ್ಕಾರ ‘ಸಾಂಕ್ರಾಮಿಕ ರೋಗಗಳ ಕಾಯ್ದೆ–1897’ ಅನ್ನು ಜಾರಿ.

* ಮಾರ್ಚ್‌ 31ರವರೆಗೆ ತರಗತಿಗಳನ್ನು ಸ್ಥಗಿತಗೊಳಿಸಿದ ದೆಹಲಿ ವಿಶ್ವವಿದ್ಯಾಲಯ, ಜಾಮಿಯ ಮಿಲ್ಲಿಯಾ ಇಸ್ಲಾಮಿಯಾ ವಿ.ವಿ

* ಬಜೆಟ್‌ ಅಧಿವೇಶನನದ ಅವಧಿ ಮೊಟಕು ಇಲ್ಲ: ಸಚಿವ ಪ್ರಲ್ಹಾದ್‌ ಜೋಶಿ

* ಪಾಕಿಸ್ತಾನದಿಂದ ಅಟ್ಟಾರಿ–ವಾಘಾ ಗಡಿ ಮೂಲಕ ಭಾರತ ಪ್ರವೇಶಿಸಲು ವಿದೇಶಿಯರಿಗೆ ಅವಕಾಶ ಇಲ್ಲ- ಬಿಎಸ್‌ಎಫ್‌

* ಮುಂಬೈ, ಪುಣೆ, ಪಿಂಪ್ರಿ ಚಿಂಚವಾಡ ಮತ್ತು ನಾಗ್ಪುರ ನಗರಗಳಲ್ಲಿ ಚಿತ್ರಮಂದಿರಗಳು, ಜಿಮ್‌ಗಳು, ಈಜುಕೊಳ ಮುಚ್ಚಲು ಸೂಚನೆ

* ಮನೆಯಿಂದಲೇ ಕಾರ್ಯನಿರ್ವಹಿಸಲು ಉದ್ಯೋಗಿಗಳಿಗೆ ಅವಕಾಶ ಕಲ್ಪಿಸುವಂತೆ ಖಾಸಗಿ ಕಂಪನಿಗಳಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕೋರಿಕೆ

* 18 ವಲಸೆ ತಪಾಸಣೆ ಠಾಣೆಗಳನ್ನು ಮುಚ್ಚಲು ಆದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.