ADVERTISEMENT

ಜನಾಂಗೀಯ ನಿಂದನೆಗೆ ಕಾರಣವಾಗುತ್ತಿದೆ ಕೊರೊನಾ ವೈರಸ್‌!

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 14:25 IST
Last Updated 25 ಮಾರ್ಚ್ 2020, 14:25 IST
   

ನವದೆಹಲಿ: ಕೊರೊನಾ ವೈರಸ್‌ ಭಾಷೆ, ಜಾತಿ, ಮತಗಳ ಭೇದವಿಲ್ಲದೆವ್ಯಾಪಿಸಿಕೊಳ್ಳುತ್ತಿರುವ ನಡುವೆಯೇ ಈಶಾನ್ಯ ರಾಜ್ಯದ ಜನರಿಗೆ ಅವಮಾನವನ್ನೂ ತಂದಿಟ್ಟಿದೆ. ಈಶಾನ್ಯ ರಾಜ್ಯದವರನ್ನು ಚೀನೀಯರು ಎಂಬ ಅನುಮಾನದ ಕಣ್ಣುಗಳಿಂದ ನೋಡುವಂತೆ ಮಾಡಿದೆ. ಇದು ಜನಾಂಗೀಯ ನಿಂದನೆಗೂ ಕಾರಣವಾಗುತ್ತಿದೆ.

ದೆಹಲಿಯಲ್ಲಿ ಭಾನುವಾರ ಮಣಿಪುರಿ ಮೂಲದ ಯುವತಿಯ ಮೇಲೆ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ತನ್ನ ಬಾಯಲ್ಲಿದ್ದ ಗುಟ್ಕಾ ಮಿಶ್ರಿತ ಎಂಜಲನ್ನು ಉಗುಳಿದ್ದೂ ಅಲ್ಲದೆ, ‘ಕೊರೊನಾ... ಕೊರೊನಾ’ ಎಂದು ಅಪಮಾನಿಸಿದ್ದ. ಇದು ಜನಾಂಗೀಯ ನಿಂದನೆಯ ಕಿಡಿ ಹೊತ್ತಿಸಿದೆ.

ಅದೇ ದಿನ ರಾತ್ರಿ, ಕೋಲ್ಕತ್ತಾದಲ್ಲಿ ವಿದ್ಯಾರ್ಥಿಗಳ ಗುಂಪಿನ ಮೇಲೆ ಸ್ಥಳೀಯರು ದಾಳಿ ನಡೆಸಿ, ಪ್ರದೇಶ ತೊರೆಯುವಂತೆ ಒತ್ತಾಯಿಸಿದ ಪ್ರಕರಣವೂ ವರದಿಯಾಗಿದೆ.

ADVERTISEMENT

ಜನಾಂಗಿಯ ನಿಂದನೆಗೆ ಇಂಬು ನೀಡಿದ ಕೊರೊನಾ ವೈರಸ್‌

ದೆಹಲಿಗೆ ಮೊದಲ ಬಾರಿಗೆ ಹೋದಾಗ ಜನ ನನ್ನನ್ನು ನೋಡುವ ರೀತಿಯೇ ವಿಭಿನ್ನವಾಗಿತ್ತು. ಅಲ್ಲಿ ಈಶಾನ್ಯ ರಾಜ್ಯದವರನ್ನು ನೋಡುವ, ನಡೆಸಿಕೊಳ್ಳುವ ರೀತಿಯ ಬಗ್ಗೆ ನಾನು ಸದಾ ಜಾಗೃತನಾಗಿರುತ್ತಿದ್ದೆ. ಆದರೆ, ಕೊರೊನಾ ವೈರಸ್‌ ಯಾವಾಗ ದೇಶವನ್ನು ಆವರಿಸಿತೋ ಆಗಿನಿಂದ ಇಲ್ಲಿ ಈಶಾನ್ಯ ರಾಜ್ಯದವರ ಮೇಲೆ ಜನಾಂಗೀಯ ನಿಂದನೆ ಹೆಚ್ಚಾಗಲಾರಂಭಿಸಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಇಂಗ್ಲಿಷ್‌ ಭಾಷಾ ಸಹಾಯಕ ಪ್ರೊಫೆಸರ್‌ ಪಮ್ಜುಲಿಯು ಗೊನಿಮೈ ಹೇಳಿದ್ದಾರೆ.

‘ನಾನು ದೆಹಲಿಯ ವಸಂತಕುಂಜ್‌ನಲ್ಲಿ ಮಾಸ್ಕ್‌ ಧರಿಸಿ ಶೂ ಖರೀದಿಸುತ್ತಿದ್ದೆ. ಅಲ್ಲಿಗೆ ಬಂದ ಇಬ್ಬರುನನ್ನನ್ನು ನೋಡಿಕೆಮ್ಮಲಾರಂಭಿಸಿದರು. ನನ್ನತ್ತ ನೋಡುತ್ತಾ ‘ಇವರ ಕೆಮ್ಮಿನಲ್ಲಿ ಕೊರೊನಾ ವೈರಸ್‌ ಇರುತ್ತದೆ’ ಎಂದರು. ದೆಹಲಿಯಲ್ಲಿ ನಾನು ಒಬ್ಬಂಟಿ. ಹೀಗಾಗಿ ಅವರನ್ನು ಎದುರಿಸಲು ನನಗೆ ಸಾಧ್ಯವಾಗಲಿಲ್ಲ. ಇಂಥ ನಿಂದನೆಗಳು ಯಾವಾಗಬೇಕಾದರೂ ಜಾಸ್ತಿಯಾಗಬಹುದು. ನಾನು ನನ್ನ ರಕ್ಷಣೆಯ ಬಗ್ಗೆ ಹೆಚ್ಚು ಆತಂಕಿತನಾಗಿದ್ದೇನೆ’ ಎಂಬ ದೆಹಲಿಯಲ್ಲಿ ನೆಲೆಸಿರುವ ಮಿಜೊರಾಂ ಮೂಲದ ವಿದ್ಯಾರ್ಥಿಯೊಬ್ಬರ ಅಳಲನ್ನು 'ದಿ ಪ್ರಿಂಟ್' ಜಾಲತಾಣ ವರದಿ ಮಾಡಿದೆ.

ಮಹಿಳೆಯರ ಮೇಲೆ ಹೆಚ್ಚು ದಾಳಿ

ಅಲಾನಾ ಗೋಲ್ಮೈ ಎಂಬುವವರು ದೆಹಲಿಯಲ್ಲಿ ಈಶಾನ್ಯ ರಾಜ್ಯದವರಿಗಾಗಿ 2007ರಿಂದಲೂ ಸಹಾಯವಾಣಿ ನಡೆಸುತ್ತಿದ್ದು, ಕೊರೊನಾ ವೈರಸ್‌ ವ್ಯಾಪಕವಾದ ನಂತರ ಸಹಾಯವಾಣಿಗೆ ಎಂದಿಗಿಂತಲೂ ಮೂರು ಪಟ್ಟು ಹೆಚ್ಚು ಜನಾಂಗೀಯ ನಿಂದನೆಯ ದೂರಿನ ಕರೆಗಳು ಬರಲಾರಂಭಿಸಿವೆ ಎಂದು ಹೇಳಿದ್ದಾರೆ.

ಜನಾಂಗೀಯ ನಿಂದನೆಗೆ ಒಳಗಾಗುತ್ತಿರುವವರಲ್ಲಿ ಮಹಿಳೆಯರೇ ಹೆಚ್ಚು ಇದು ಗಮನಿಸಬೇಕಾದ ಸಂಗತಿಎಂದು ಅಲಾನಾ ಹೇಳಿದ್ದಾರೆ.

ಅಸ್ಪಷ್ಟ ಕಾಯ್ದೆಗಳು

ಇಂಥ ಪ್ರಕರಣಗಳಿಗೆ ಭಾರತೀಯ ದಂಡ ಸಂಹಿತೆಯ ಯಾವ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂಬುದರ ಬಗ್ಗೆ ಪೊಲೀಸರಿಗೆ ಸರಿಯಾದ ಮಾಹಿತಿಯೇ ಇಲ್ಲ. ಹೀಗಾಗಿ ಜನಾಂಗೀಯ ನಿಂದನೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ದೆಹಲಿಯಲ್ಲಿ ಈಶಾನ್ಯ ರಾಜ್ಯದವರಿಗಾಗಿಯೇ ರಚಿಸಲಾಗಿರುವ ವಿಶೇಷ ಪೊಲೀಸ್‌ ಪಡೆಯ (SPUNER)ಆಯುಕ್ತ ಹಿಬು ತಮಾಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.