ADVERTISEMENT

ಕೊರೊನಾ ವೈರಸ್ ಎಫೆಕ್ಟ್: ದೂರದರ್ಶನದ ವೀಕ್ಷಕರ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 22:18 IST
Last Updated 9 ಏಪ್ರಿಲ್ 2020, 22:18 IST
   

ಮುಂಬೈ:‘ರಾಮಾಯಣ’ ಮತ್ತು ‘ಮಹಾಭಾರತ’ದಂತಹ ಯಶಸ್ವಿ ಧಾರಾವಾಹಿಗಳ ಮರುಪ್ರಸಾರದ ಹಿಂದೆಯೇ ಅತ್ಯಧಿಕ ಪ್ರೇಕ್ಷಕರು ವೀಕ್ಷಿಸುವ ಚಾನಲ್ ಎಂಬ ಹಿರಿಮೆಗೆ ದೂರದರ್ಶನ ರಾಷ್ಟ್ರೀಯ ವಾಹಿನಿ ಹೆಸರಾಗಿದೆ.

ಏಪ್ರಿಲ್‌ 3ಕ್ಕೆ ಕೊನೆಯಾದ ವಾರದ ಅಂತ್ಯದಲ್ಲಿ ಬೆಳಿಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ದೂರದರ್ಶನದ ವೀಕ್ಷಕರ ಸಂಖ್ಯೆ ಸುಮಾರು ಶೇಕಡಾ 40,000 ದಷ್ಟು ಏರಿಕೆಯಾಗಿದೆ ಎಂದು ಪ್ರಸಾರ ವಾಹಿನಿಗಳ ವೀಕ್ಷಕರ ಸಂಶೋಧನಾ ಮಂಡಳಿ (ಬಿಎಆರ್‌ಸಿ) ಸಮೀಕ್ಷೆ ಹೇಳಿದೆ.

ಈ ಹಿಂದಿನ ಯಶಸ್ವಿ ಧಾರಾವಾಹಿಗಳಾದ ಶಕ್ತಿಮಾನ್, ಬುನಿಯಾದ್‌ ಅನ್ನೂ ದೂರದರ್ಶನ ಮರುಪ್ರಸಾರ ಮಾಡುತ್ತಿದ್ದು, ಲಾಕ್‌ ಡೌನ್‌ ಅವಧಿಯಲ್ಲಿ ಪ್ರೇಕ್ಷಕರನ್ನು ಸೆಳೆದಿವೆ. ಆದರೆ, ಡಿ.ಡಿ ಪ್ರೇಕ್ಷಕರ ಸಂಖ್ಯೆ ಗಣನೀಯ ಏರಿಕೆ ಕಾಣಲು ಪ್ರಮುಖವಾಗಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳೇ ಕಾರಣ ಎಂದೂ ಬಿಎಆರ್‌ಸಿ ತಿಳಿಸಿದೆ.

ADVERTISEMENT

ಲಾಕ್‌ ಡೌನ್ ಅವಧಿಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಒಂಬತ್ತು ನಿಮಿಷ ಹಣತೆ ಬೆಳಗಿಸಬೇಕು ಎಂದು ಕರೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ಕಡಿಮೆ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿದೆ. ಆದರೆ, ಲಾಕ್‌ಡೌನ್‌ ಘೋಷಿಸಿ ಪ್ರಧಾನಿ ಮಾಡಿದ್ದ ಭಾಷಣವನ್ನು ಹೆಚ್ಚಿನ ಜನರು ವೀಕ್ಷಿಸಿದ್ದರು ಎಂದು ಸಂಸ್ಥೆ ತಿಳಿಸಿದೆ.

ಲಾಕ್‌ಡೌನ್‌ ಘೋಷಣೆಗೆ ಸಂಬಂಧಿಸಿದ ಪ್ರಧಾನಿ ಭಾಷಣವನ್ನು 19.7 ಕೋಟಿ ಜನರು ವೀಕ್ಷಿಸಿದ್ದರೆ, ದೀಪ ಬೆಳಗಿಸುವುದಕ್ಕೆ ಸಂಬಂಧಿಸಿದ ಭಾಷಣವನ್ನು 11.6 ಕೋಟಿ ಜನರು ವೀಕ್ಷಿಸಿದ್ದಾರೆ.

ಮತ್ತೊಂದು ಗಮನಾರ್ಹ ಅಂಶವೆಂದರೆ ದೇಶದಲ್ಲಿ ಯಾವುದೇ ಕ್ರೀಡಾ ಚಟುವಟಿಕೆಗಳು ಇಲ್ಲವಾದರೂ ಕ್ರೀಡಾವಾಹಿನಿಗಳ ವೀಕ್ಷಕರ ಸಂಖ್ಯೆಯಲ್ಲಿ ಶೇ 21ರಷ್ಟು ಏರಿಕೆ ಕಂಡಿದೆ. ವಿಶ್ವಕಪ್ ಸೇರಿದಂತೆ ಭಾರತ ಕ್ರಿಕೆಟ್‌ ತಂಡದ ಗೆಲುವಿಗೆ ಸಂಬಂಧಿಸಿದ ವಿವಿಧ ಪಂದ್ಯಗಳ ಮರುಪ್ರಸಾರ ಇದಕ್ಕೆ ಕಾರಣ ಎಂದೂ ಸಂಸ್ಥೆಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.