ನವದೆಹಲಿ: ಕೊರನಾ ವೈರಸ್ ಅನ್ನು ‘ಅಧಿಸೂಚಿತ ವಿಪತ್ತು’ ಎಂದು ಘೋಷಿಸಿರುವ ಕೇಂದ್ರ ಸರ್ಕಾರ, ಈ ಬಗ್ಗೆ ಶನಿವಾರ ಆದೇಶ ಹೊರಡಿಸಿದೆ.
ಈ ಕಾಯಿಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳು ವಿಪತ್ತು ಪರಿಹಾರ ನಿಧಿಯನ್ನು (ಎಸ್‌ಡಿಆರ್‌ಎಫ್) ಬಳಸುವಂತೆ ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ಸೂಚಿಸಿದೆ. ಅಗತ್ಯವಿರುವ ಉಪಕರಣಗಳು ಮತ್ತು ವೈರಸ್ ಸೋಂಕಿಗೆ ಒಳಗಾಗಿರುವವರನ್ನು ಪ್ರತ್ಯೇಕವಾಗಿಸಿ ಸೌಲಭ್ಯಗಳನ್ನು ಕಲ್ಪಿಸಲು ಈ ನಿಧಿ ಬಳಸಬಹುದು ಎಂದು ಕೇಂದ್ರ ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ರಾಜ್ಯಮಟ್ಟದ ಸಮಿತಿಯು ಎಸ್‌ಡಿಆರ್‌ಎಫ್ ಬಳಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದೆ.
ಕೋವಿಡ್ 19 ಅಧಿಸೂಚಿತ ವಿಪತ್ತು ಎಂದು ಘೋಷಿಸಿದ್ದರಿಂದ ರಾಜ್ಯ ಸರ್ಕಾರಗಳು ತಾತ್ಕಾಲಿಕ ವಸತಿ, ಆಹಾರ ವಿತರಣೆ, ನೀರು, ವೈದ್ಯಕೀಯ ಆರೈಕೆಗೆ ತಗಲುವ ವೆಚ್ಚವನ್ನು ಎಸ್‌ಡಿಆರ್‌ಎಫ್‌ನಿಂದ ಬಳಸಬಹುದು ಎಂದು ಸೂಚಿಸಿದೆ.
ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಪೊಲೀಸರಿಗೆ, ಮುನ್ಸಿಪಲ್ ಅಧಿಕಾರಿಗಳಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ರಕ್ಷಣಾ ಉಪಕರಣಗಳನ್ನು ಖರೀದಿಸಲು ಈ ಅನುದಾನ ಬಳಸಬಹುದು ಎಂದು ತಿಳಿಸಿದೆ.
ವೈರಸ್ ಸೋಂಕಿನಿಂದ ಸಾವಿಗೀಡಾಗುವ ವ್ಯಕ್ತಿಯ ಕುಟುಂಬಕ್ಕೆ ₹4 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದ ಕೇಂದ್ರ ಸರ್ಕಾರ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರವನ್ನು ವಾಪಸ್ ಪಡೆಯಿತು.
ಸಸ್ಯಹಾರ ಮಾತ್ರ ಸೇವಿಸಿ ಎಂದ ಹರಿಯಾಣ ಸಚಿವ( ಚಂಡಿಗಡ ,ಪಿಟಿಐ): ‘ಕೊರೊನಾ ವೈರಸ್ ಸೇರಿ
ದಂತೆ ವಿವಿಧ ಕಾಯಿಲೆಗಳಿಗೆ ಮಾಂಸಾಹಾರ ಸೇವನೆಯೇ ಕಾರಣ’ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ಸಸ್ಯಾಹಾರಿಯಾಗಿ. ವಿವಿಧ ಪ್ರಾಣಿಗಳ ಮಾಂಸವನ್ನು ತಿನ್ನುವುದರಿಂದ ಕೊರೊನಾದಂತಹ ವೈರಸ್ ಹರಡುವ ಕಾಯಿಲೆಗಳನ್ನು ಸೃಷ್ಟಿಸಬೇಡಿ’ ಎಂದು ವಿಜ್ ಟ್ವೀಟ್ ಮಾಡಿದ್ದಾರೆ.
ಆದರೆ, ಇಂತಹ ಹೇಳಿಕೆಗಳ ಬಗ್ಗೆ ಗಮನಹರಿಸಬಾರದು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದರು. ವಿಶ್ವ ಪ್ರಾಣಿಗಳ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ಆಹಾರ ಸುರಕ್ಷತಾ ಸಂಸ್ಥೆ (ಎಫ್‌ಎಸ್‌ಎಐ) ಸಹ ಈ ಬಗ್ಗೆ ಸ್ಪಷ್ಟನೆ ನೀಡಿವೆ.
ಸಾರ್ಕ್ ಕಾನ್ಫೆರೆನ್ಸ್‌ನಲ್ಲಿ ಪಾಕ್ ಭಾಗಿ
ಇಸ್ಲಾಮಾಬಾದ್ (ಪಿಟಿಐ): ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಎದುರಿಸುವ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿರುವ ಸಾರ್ಕ್ ಸದಸ್ಯ ರಾಷ್ಟ್ರಗಳ ವಿಡಿಯೊ ಕಾನ್ಫೆರೆನ್ಸ್‌ನಲ್ಲಿ ಭಾಗವಹಿಸುವುದಾಗಿ ಪಾಕಿಸ್ತಾನ ಹೇಳಿದೆ. ಆದರೆ, ಪ್ರಧಾನಿ ಇಮ್ರಾನ್ ಖಾನ್ ಅವರು ಖುದ್ದಾಗಿ ಭಾಗವಹಿಸುವುದಿಲ್ಲ.
ಖಾನ್ ಅವರ ವಿಶೇಷ ಸಲಹೆಗಾರ ಡಾ. ಜಫರ್ ಮಿರ್ಜಾ ಅವರು ವಿಡಿಯೊ ಕಾನ್ಫೆರೆನ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಭಾನುವಾರ ಈ ವಿಡಿಯೊ ಕಾನ್ಫೆರೆನ್ಸ್ ನಡೆಯಲಿದೆ.
ಕೊರೊನಾ ವೈರಸ್ ಅನ್ನು ಎದುರಿಸಲು ಬಲವಾದ ಕಾರ್ಯತಂತ್ರ ರೂಪಿಸಲು ಮೋದಿ ಅವರು ಸಾರ್ಕ್‌ನ 8 ಸದಸ್ಯ ರಾಷ್ಟ್ರಗಳ ಗುಂಪಿನೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದ್ದರು.
ಮೋದಿ ಅವರ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪಾಕಿಸ್ತಾನ, ಸಾರ್ಕ್ ವಿಡಿಯೊ ಕಾನ್ಫೆರೆನ್ಸ್‌ನಲ್ಲಿ ಭಾಗವಹಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.
ನಾಗಪುರ: ಇನ್ನೊಬ್ಬ ವ್ಯಕ್ತಿಯಲ್ಲಿ ಸೋಂಕು
ನಾಗಪುರ (ಪಿಟಿಐ): ನಗರದಲ್ಲಿ ಶನಿವಾರ ಇನ್ನೊಬ್ಬ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಇದರಿಂದ ನಗರದಲ್ಲೇ ಕೋವಿಡ್–19 ಇರುವವರ ಸಂಖ್ಯೆ ನಾಲ್ಕಕ್ಕೇರಿದೆ.
43 ವರ್ಷದ ಈ ವ್ಯಕ್ತಿಯು ಅಮೆರಿಕಕ್ಕೆ ತೆರಳಿದ್ದ. ಇವರನ್ನು ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಗೆ ಪರಾರಿ: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಕೊರೊನಾ ವೈರಸ್ ಶಂಕಿತ ನಾಲ್ವರು ಮಾಹಿತಿ ನೀಡದೆಯೇ ಮನೆಗೆ ತೆರಳಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಕೆಲ ಹೊತ್ತಿನ ಬಳಿಕ ಈ ನಾಲ್ವರನ್ನು ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಯಿತು. ಈ ನಾಲ್ವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.