ADVERTISEMENT

ವೆಂಟಿಲೇಟರ್‌ಗಳ ರಫ್ತಿಗೆ ಕೇಂದ್ರದ ಹಸಿರು ನಿಶಾನೆ; ನಡೆ ಖಂಡಿಸಿದ ಕಾಂಗ್ರೆಸ್‌

ಕೇಂದ್ರ ಸರ್ಕಾರದ ನಡೆ ಖಂಡಿಸಿದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 20:51 IST
Last Updated 1 ಆಗಸ್ಟ್ 2020, 20:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ ತಯಾರಾಗಿರುವ ವೆಂಟಿಲೇಟರ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಲು ಕೇಂದ್ರ ಸರ್ಕಾರವು ಶನಿವಾರ ಹಸಿರು ನಿಶಾನೆ ತೋರಿದೆ. ಹೀಗಾಗಿ ಉತ್ಪಾದಕ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.

ದೇಶದಲ್ಲಿ ಕೋವಿಡ್‌–19 ಮರಣ ಪ್ರಮಾಣವು ಗುರುವಾರದ ವೇಳೆಗೆ ಶೇಕಡ 2.15ಕ್ಕೆ ಇಳಿಕೆಯಾಗಿದೆ. ಹೀಗಾಗಿಕೋವಿಡ್‌–19 ಉಸ್ತುವಾರಿ ಹೊಂದಿರುವಉನ್ನತ ಸಚಿವರ ತಂಡವು (ಜಿಒಎಂ) ವೆಂಟಿಲೇಟರ್‌ಗಳ ರಫ್ತಿಗೆ ಒಪ್ಪಿಗೆ ಕೊಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಡ್‌–19 ರೋಗಿಗಳ ಪೈಕಿ ಶೇಕಡ 0.28 ಮಂದಿ ವೆಂಟಿಲೇಟರ್‌ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಹರ್ಷವರ್ಧನ್‌ ಅವರು ಶುಕ್ರವಾರ ಜಿಒಎಂಗೆ ಮಾಹಿತಿ ನೀಡಿದ್ದರು. ಇದು ಗುರುವಾರದವರೆಗಿನ ಅಂಕಿ ಅಂಶವಾಗಿತ್ತು.

ADVERTISEMENT

ಆದರೆ ಶುಕ್ರವಾರದ ವೇಳೆಗೆ ವೆಂಟಿಲೇಟರ್‌ ನೆರವಿನಿಂದ ಚಿಕಿತ್ಸೆ ಪಡೆಯುವವರ ಪ್ರಮಾಣವು ಶೇಕಡ 0.22ಕ್ಕೆ ಇಳಿಕೆಯಾಗಿತ್ತು.

‘ಭಾರತದ ಯಾವ ಆಸ್ಪತ್ರೆಗಳಲ್ಲಿಯೂ ವೆಂಟಿಲೇಟರ್‌ಗಳ ಕೊರತೆ ಇಲ್ಲವೇ? ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ರಫ್ತಿಗೆ ಅನುಮತಿ ನೀಡಲಾಗಿದೆಯೇ’ ಎಂದು ಕಾಂಗ್ರೆಸ್‌ ಮುಖಂಡ ರಂದೀಪ್‌ ಸಿಂಗ್‌ ಸುರ್ಜೇವಾಲಾ, ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಹೆಚ್ಚು ವೆಂಟಿಲೇಟರ್‌ಗಳ ಅಗತ್ಯವಿರುವುದನ್ನುಮನಗಂಡು ಕೇಂದ್ರ ಸರ್ಕಾರವು ಮಾರ್ಚ್‌ನಲ್ಲಿ ಇವುಗಳ ರಫ್ತನ್ನು ನಿಷೇಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.