ನವದೆಹಲಿ: ಹೆಚ್ಚಿಸಲಾಗಿದ್ದ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಪಾವತಿ ತಡೆ ಹಿಡಿಯಲು ನಿರ್ಧರಿಸಿರುವುದಾಗಿ ಸರ್ಕಾರ ಗುರುವಾರ ಘೋಷಿಸಿದೆ. ಕೋವಿಡ್–19ನಿಂದ ಎದುರಾಗಿರುವ ಬಿಕ್ಕಟ್ಟಿನಿಂದ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ನೀಡಲು ಉದ್ದೇಶಿಸಲಾಗಿದ್ದ ಹೆಚ್ಚುವರಿ ತುಟ್ಟಿಭತ್ಯೆ (ಡಿಎ ಮತ್ತು ಡಿಆರ್) ಪಾವತಿಯನ್ನು 2021ರ ಜುಲೈ ವರೆಗೂತಡೆಹಿಡಿಯಲಾಗಿದೆ.
ಇದೇ ವರ್ಷ ಜನವರಿಯಿಂದ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿ ಸರ್ಕಾರ ಆದೇಶಿಸಿತ್ತು. ಅದನ್ನು ಈಗ ಹಿಂಪಡೆದಿರುವುದಾಗಿ ಸರ್ಕಾರ ಹೇಳಿದೆ. ಪ್ರಸ್ತುತ ದರದಲ್ಲೇ ಡಿಎ ಮತ್ತು ಡಿಆರ್ ಮುಂದುವರಿಯಲಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಲೆ ಏರಿಕೆ ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಪರಿಷ್ಕರಿಸಲಾಗುತ್ತದೆ. ಪ್ರಸ್ತುತ ಕೈಗೊಳ್ಳಲಾಗಿರುವ ನಿರ್ಧಾರವು ಕೇಂದ್ರ ಸರ್ಕಾರದ 49.26 ಲಕ್ಷ ನೌಕರರು ಹಾಗೂ 61.17 ಲಕ್ಷ ಪಿಂಚಣಿದಾರರ ಮೇಲೆ ಪರಿಣಾಮ ಬೀರಲಿದೆ.
ಹಾಲಿ ಇರುವ ಶೇ 17 ತುಟ್ಟಿಭತ್ಯೆಯನ್ನು ಶೇ 21ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿತ್ತು. ತುಟ್ಟಿಭತ್ಯೆ ಹೆಚ್ಚಳದಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ ₹14,595 ಕೋಟಿ ವೆಚ್ಚವಾಗುತ್ತದೆ.
ಪ್ರಧಾನಿ, ಸಚಿವರು, ರಾಷ್ಟ್ರಪತಿ ಹಾಗೂ ಸಂಸದರ ವೇತನವನ್ನು ಶೇ 30ರಷ್ಟು ಕಡಿತಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಈಗಾಗಲೇ ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.