ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ (ಕೋವಿಡ್–19) ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಘೋಷಿಸಲಾಗಿರುವ ಲಾಕ್‌ಡೌನ್ ನಾಲ್ಕನೇ ಅವಧಿಗೆ ಕಾಲಿಡುತ್ತಿದೆ. ಈ ಅವಧಿಯಲ್ಲಿ ಹಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ.
ನಾಲ್ಕನೇ ಲಾಕ್‌ಡೌನ್‌ನಲ್ಲಿ ಏನೇನು ಸೇವೆ ಲಭ್ಯವಿರಲಿವೆ? ಯಾವುದಕ್ಕೆಲ್ಲ ನಿರ್ಬಂಧವಿದೆ ಎಂದು ಕೇಂದ್ರ ಗೃಹ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ವಿಸ್ತೃತವಾಗಿ ಉಲ್ಲೇಖಿಸಲಾಗಿದೆ. ರಾಜ್ಯ ಸರ್ಕಾರಗಳು ಕೆಂಪು, ಹಸಿರು, ಕಿತ್ತಳೆ ವಲಯಗಳನ್ನು ನಿರ್ಧರಿಸಬಹುದಾಗಿದೆ. ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿ ಕಂಟೈನ್‌ಮೆಂಟ್ ವಲಯಗಳ ಗಡಿಯನ್ನು ಜಿಲ್ಲಾ ಅಧಿಕಾರಿಗಳು ಗುರುತಿಸಬೇಕಾಗುತ್ತದೆ.
ಕಂಟೈನ್‌ಮೆಂಟ್ ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಾರಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆಟೊ, ಟ್ಯಾಕ್ಸಿಗಳು ಕಾರ್ಯನಿರ್ವಹಿಸಬಹುದಾಗಿದೆ.
ಯಾವುದಕ್ಕೆಲ್ಲ ಅನುಮತಿ?
* ಕ್ರೀಡಾ ಕಾಂಪ್ಲೆಕ್ಸ್‌ಗಳು, ಸ್ಟೇಡಿಯಂಗಳು ತೆರೆಯಬಹುದು. ವೀಕ್ಷಕರಿಗೆ ಪ್ರವೇಶ ನೀಡುವಂತಿಲ್ಲ
* ಕಂಟೈನ್‌ಮೆಂಟ್ ಪ್ರದೇಶ ಹೊರತುಪಡಿಸಿ ಅಂತರರಾಜ್ಯ ಪ್ರಯಾಣಿಕ ವಾಹನಗಳ ಹಾಗೂ ಬಸ್ ಸಂಚಾರಕ್ಕೆ ಅನುಮತಿ. ಉಭಯ ರಾಜ್ಯಗಳ ಸಮ್ಮತಿಯೊಂದಿಗೆ ಸಂಚಾರ ಕೈಗೊಳ್ಳಬಹುದು
* ಕೆಂಪು, ಹಸಿರು, ಕಿತ್ತಳೆ ವಲಯಗಳನ್ನು ರಾಜ್ಯಗಳು ನಿರ್ಧರಿಸಬೇಕು. ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿ ಕಂಟೈನ್‌ಮೆಂಟ್ ವಲಯಗಳನ್ನು ಜಿಲ್ಲಾ ಅಧಿಕಾರಿಗಳು ಗುರುತಿಸಬೇಕು
* ಕಂಟೈನ್‌ಮೆಂಟ್ ವಲಯಗಳಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ
* ವಿಶೇಷ ನಿರ್ಬಂಧ ವಿಧಿಸದೇ ಇರುವ ಚಟುವಟಿಕೆಗಳಿಗೆ ಅನುಮತಿ ಇದೆ
* ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕಾರಿಗಳ ಅಂತರರಾಜ್ಯ ಪ್ರಯಾಣ ಮತ್ತು ರಾಜ್ಯದೊಳಗಿನ ಪ್ರಯಾಣಕ್ಕೆ ನಿರ್ಬಂಧ ವಿಧಿಸುವಂತಿಲ್ಲ
* ಎಲ್ಲ ರೀತಿಯ ಸರಕು ಸಾಗಣೆ ವಾಹನಗಳ ಅಂತರರಾಜ್ಯ ಪ್ರಯಾಣಕ್ಕೆ ಎಲ್ಲ ರಾಜ್ಯಗಳೂ ಅನುಮತಿ ನೀಡಬೇಕು. ಖಾಲಿ ಟ್ರಕ್‌ಗಳ ಸಂಚಾರಕ್ಕೂ ಅವಕಾಶ ನೀಡಬೇಕು
ಯಾವುದಕ್ಕೆಲ್ಲ ನಿರ್ಬಂಧ?
* ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣ
* ಮೆಟ್ರೊ ರೈಲು ಸೇವೆ
* ಶೈಕ್ಷಣಿಕರ ಸಂಸ್ಥೆಗಳು ತೆರೆಯಬಾರದು
* ಹೋಟೆಲ್, ರೆಸ್ಟೋರೆಂಟ್ ಮತ್ತು ಇತರ ಆತಿಥ್ಯ ಸೇವೆಗಳು
* ಚಿತ್ರ ಮಂದಿರಗಳು, ಮಾಲ್, ಜಿಮ್, ಈಜುಕೊಳ, ಬಾರ್‌ಗಳು, ಥಿಯೇಟರ್‌ಗಳು ತೆರೆಯುವುದಿಲ್ಲ
* ಗುಂಪು ಸೇರುವಂತಿಲ್ಲ
* ಧಾರ್ಮಿಕ ಕೇಂದ್ರಗಳು ತೆರಯುವಂತಿಲ್ಲ
* ರಾತ್ರಿ 7ರಿಂದ ಬೆಳಿಗ್ಗೆ 7ರ ವರೆಗಿನ ಕರ್ಫ್ಯೂ ಮುಂದುವರಿಕೆ
*65 ವರ್ಷಕ್ಕಿಂತ ಮೇಲಿನ ವಯಸ್ಸಿನವರು, ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲೇ ಇರಬೇಕು
* ರಾಜ್ಯ ಸರ್ಕಾರಗಳು ಪರಿಸ್ಥಿತಿ ನೋಡಿಕೊಂಡು ವಿವಿಧ ವಲಯಗಳಲ್ಲಿ ನಿರ್ದಿಷ್ಟ ಚಟುವಟಿಕೆಗಳನ್ನು ನಿಷೇಧಿಸಬಹುದಾಗಿದೆ. ಅಗತ್ಯವೆನಿಸಿದಲ್ಲಿ ನಿರ್ಬಂಧಗಳನ್ನು ವಿಧಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.