ಮುಂಬೈ (ಪಿಟಿಐ): ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆ ದರ ಕಡಿತ ಮಾಡಿರುವುದು ಆರ್ಥಿಕ ಕೊರತೆಗೆ ಕಾರಣವಾಗಲಿದೆ ಎಂದು ಹಣಕಾಸು ವಲಯದ ತಜ್ಞರು ಮತ್ತು ಷೇರು ಮಾರುಕಟ್ಟೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಪೊರೇಟ್ ತೆರಿಗೆ ಕಡಿತ ಮಾಡಿರುವುದರಿಂದ ದೇಶದ ತೆರಿಗೆ ಮೂಲದ ಆದಾಯದಲ್ಲಿ ಭಾರಿ ಪ್ರಮಾಣದ ಖೋತಾ ಆಗಲಿದೆ. ಇದರಿಂದ ಸರ್ಕಾರವು ನಿರೀಕ್ಷಿಸಿರುವುದಕ್ಕಿಂತಲೂ ಅಧಿಕ ಪ್ರಮಾಣದ ಆರ್ಥಿಕ ಕೊರತೆ ತಲೆದೋರಲಿದೆ. ಆದರೆ ದಿರ್ಘಾವಧಿಯಲ್ಲಿ ಆರ್ಥಿಕತೆಯ ಉತ್ತೇಜನಕ್ಕೆ ಈ ಕ್ರಮ ನೆರವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
‘ಇದು ಕೇಂದ್ರ ಸರ್ಕಾರದ ಆರ್ಥಿಕ ಕೊರತೆ ಮಾತ್ರವಲ್ಲ. ಕೇಂದ್ರದ ಬಜೆಟ್‌ನಲ್ಲಿ ಆರ್ಥಿಕ ಕೊರತೆ ಹೆಚ್ಚಾದರೆ ಅದು ಎಲ್ಲಾ ರಾಜ್ಯಗಳ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರಗಳು ಸಾಲ ಮಾಡಬೇಕಾಗುತ್ತದೆ ಇಲ್ಲವೇ ಬಜೆಟ್ ವಿನಿಯೋಗವನ್ನು ಮುಂದೂಡಬೇಕಾಗುತ್ತದೆ’ ಎಂದು ಆರ್ಥಿಕ ವಹಿವಾಟು ರೇಟಿಂಗ್ ಸಂಸ್ಥೆ ಇಕ್ರಾ ಹೇಳಿದೆ.
‘ಈ ಬಾರಿಯ ಬಜೆಟ್‌ನಲ್ಲಿ ಶೇ 3.3ರಷ್ಟು ಆರ್ಥಿಕ ಕೊರತೆ ಉಂಟಾಗಬಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿತ್ತು. ಆದರೆ ತೆರಿಗೆ ಕಡಿತ ಕ್ರಮದಿಂದ ಈ ಮಿತಿಯನ್ನು ಮೀರದೇ ಇರುವುದು ಕಷ್ಟವಾಗುತ್ತದೆ. ತೆರಿಗೆ ಕಡಿತದಿಂದ ಆಗುವ ಆದಾಯ ಖೋತಾದಿಂದ ಆರ್ಥಿಕ ಕೊರತೆಯ ಪ್ರಮಾಣ ಶೇ 4.1ಕ್ಕೆ ಜಿಗಿಯುವ ಅಪಾಯವಿದೆ’ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಅಭಿಪ್ರಾಯಪಟ್ಟಿದೆ.
‘ಆರ್ಥಿಕ ಕೊರತೆಯನ್ನು ಕಡಿಮೆ ಮಾಡಲೇಬೇಕಿದ್ದರೆ ಸರ್ಕಾರವು ತನ್ನ ವೆಚ್ಚವನ್ನು ಕಡಿಮೆ ಮಾಡಬೇಕಾಗುತ್ತದೆ. ಇದಕ್ಕಾಗಿ ವಿವಿಧ ಯೋಜನೆಗಳಿಗೆ ಮೀಸಲಿರಿಸಿರುವ ಅನುದಾನವನ್ನು ಕಡಿಮೆ ಮಾಡಬೇಕಾಗುತ್ತದೆ ಮತ್ತು ಸರ್ಕಾರ ತನ್ನ ಷೇರುಗಳನ್ನು ಮಾರಾಟ ಮಾಡಬೇಕಾಗುತ್ತದೆ’ ಎಂದು ಷೇರು ವಹಿವಾಟು ಸಂಸ್ಥೆ ಆಕ್ಸಿಸ್ ಸೆಕ್ಯುರಿಟೀಸ್ ಅಭಿಪ್ರಾಯಪಟ್ಟಿದೆ.
ಕಾಂಗ್ರೆಸ್ ಲೇವಡಿ: ‘ನಿರ್ಮಲಾ ಸೀತಾರಾಮನ್ ಅವರು ಕಷ್ಟಪಟ್ಟು ಸಿದ್ಧಪಡಿಸಿದ್ದ ಬಜೆಟ್ ಒಂದು ತಿಂಗಳಲ್ಲಿ ಸಂಪೂರ್ಣ ಉಲ್ಟಾ ಆಗಿದೆ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ
40 ಪೈಸೆ:ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಆಗಿರುವ ಹೆಚ್ಚಳ
₹ 70.94:ಡಾಲರ್ ಎದುರು ರೂಪಾಯಿಯ ಮೌಲ್ಯ
ದಿಗಿಲಿನ ನಿರ್ಧಾರ
‘ಕಾರ್ಪೊರೇಟ್ ತೆರಿಗೆ ದರ ಕಡಿತವು ಸರ್ಕಾರ ದಿಗಿಲಿನಿಂದ ತೆಗೆದುಕೊಂಡ ನಿರ್ಧಾರವಾಗಿದೆ. ಇದೊಂದು ಆರ್ಥಿಕ ಮತ್ತು ರಾಜಕೀಯ ದುಸ್ಸಾಹಸವಾಗಿದೆ. ಇದರಿಂದದೇಶದ ಆರ್ಥಿಕತೆಗೆ ಭಾರಿ ಹೊಡೆತಬೀಳಲಿದೆ’ ಎಂದು ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ.
ಸರ್ಕಾರದ ಇಂತಹ ನಡೆಗಳಿಂದ ದೇಶದ ಆರ್ಥಿಕತೆಯ ಮೇಲೆ ಕುಸಿತದ ಕಾರ್ಮೋಡ ಕವಿದಿದೆ. ಬಿಜೆಪಿ ಸರ್ಕಾರವನ್ನು ಇನ್ನು ಆರ್ಥಿಕ ಕುಸಿತ ಮತ್ತು ಆರ್ಥಿಕ ಸ್ಥಗಿತಗಳಜತೆ ಗುರುತಿಸಬೇಕಾಗುತ್ತದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
‘ಸರ್ಕಾರವು ಕಾರ್ಪೊರೇಟ್ ಜನರಿಗೆ ಮಾತ್ರ ತೆರಿಗೆ ದರ ಕಡಿತದ ಲಾಭ ನೀಡುತ್ತಿದೆ.ಆದರೆ ದಿನನಿತ್ಯದ ಬದುಕು ನಡೆಸಲುಒದ್ದಾಡುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನಯಾಪೈಸೆಯಷ್ಟೂ ವಿನಾಯಿತಿ ಘೋಷಿಸಿಲ್ಲ. ಸರ್ಕಾರದ ಈ ಆರ್ಥಿಕದುಸ್ಸಾಹಸದ ಹೊರೆಯನ್ನು ಹೊರುವವರು ಯಾರು’ ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.
ಮತ್ತಷ್ಟು ಧಕ್ಕೆ: ರಾಹುಲ್
‘ವಿಶ್ವದ ಅತ್ಯಂತ ದುಬಾರಿ ಕಾರ್ಯಕ್ರಮ ‘ಹೌಡಿ ಮೋದಿ’ಯ ಹೊಸ್ತಿಲಲ್ಲೇ ದೇಶದ ಷೇರುಮಾರುಕಟ್ಟೆ ಜಿಗಿಯುವಂತೆ ಪ್ರಧಾನಿ ಮಾಡಿದ್ದಾರೆ, ಅದೂ ₹ 1.45 ಲಕ್ಷ ಕೋಟಿಯ ವೆಚ್ಚದಲ್ಲಿ. ಆದರೆ ಯಾವ ಕಾರ್ಯಕ್ರಮವೂ ದೇಶದ ಆರ್ಥಿಕತೆಯ ಅಧೋಗತಿಯನ್ನು ಮರೆಮಾಚುವುದಿಲ್ಲ. ‘ಹೌಡೀ ಮೋದಿ’ಯು ನಮ್ಮ ಆರ್ಥಿಕತೆಗೆ ಮತ್ತಷ್ಟು ಧಕ್ಕೆ ತಂದಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
***
‘ಹೌಡಿ ಮೋದಿ’ ಭೇಟಿ ವೇಳೆ ವಿದೇಶಿ ಸಟ್ಟಾ ವ್ಯಾಪಾರಿಗಳಿಗೆ ಭಾರಿ ರಿಯಾಯಿತಿ ಘೋಷಣೆಯಾಗಿದೆ. ನಮಗೆ ಕೆಟ್ಟ ಆಡಳಿತ, ಸರ್ಕಸ್ ಮಾತ್ರ
-ಸೀತಾರಾಂ ಯೆಚೂರಿ, ಸಿಪಿಎಂ ಮಹಾ ಕಾರ್ಯದರ್ಶಿ
***
28 ವರ್ಷಗಳಲ್ಲಿಯೇ ಅತ್ಯಂತ ದಿಟ್ಟ ಕ್ರಮ ಇದಾಗಿದೆ. ಹೊಸ ತಯಾರಿಕಾ ಘಟಕ ಸ್ಥಾಪನೆಗೆ ಉತ್ತೇಜನ ನೀಡಿರುವುದು ಜಾಗತಿಕ ಹೂಡಿಕೆಯನ್ನು ಹೆಚ್ಚಿಸಲಿದೆ
-ರಜನೀಶ್ ಕುಮಾರ್, ಎಸ್‌ಬಿಐ ಅಧ್ಯಕ್ಷ
***
ಇದು ಚಾರಿತ್ರಿಕ ನಿರ್ಧಾರ. ‘ಭಾರತದಲ್ಲಿ ಸುಲಲಿತ ವ್ಯಾಪಾರ’ ಸುಧಾರಿಸುವ ನಿಟ್ಟಿನಲ್ಲಿ ದೂರಗಾಮಿ ಪರಿಣಾಮ ಉಂಟುಮಾಡಲಿದೆ. ಹೂಡಿಕೆದಾರರ ಭರವಸೆಯನ್ನು ಹೆಚ್ಚಿಸಲಿದೆ
-ಆಶಿಶ್‌ಕುಮಾರ್ ಚವಾಣ್, ಎಂಡಿ ಮತ್ತು ಸಿಇಒ, ಬಿಎಸ್‌ಸಿ
***
ಈ ನಿರ್ಧಾರದಿಂದ ಸರ್ಕಾರದ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಉತ್ತೇಜನ ಲಭಿಸಲಿದೆ. ಉದ್ಯೋಗಗಳು ಸೃಷ್ಟಿಯಾಗುವವು. ಇತರ ಕ್ಷೇತ್ರಗಳ ಮೇಲೂ ಪರಿಣಾಮ ಉಂಟಾಗಲಿದೆ
-ಆರ್. ಅನ್ಷುಮಾನ್ ಮ್ಯಾಗಜಿನ್, ಸಿಬಿಆರ್‌ಇ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.