ADVERTISEMENT

ವಾಯ್ಕರ್‌ ಪ್ರಮಾಣವಚನ ಪಡೆಯುವುದನ್ನು ತಡೆಯಿರಿ: ಶಿವಸೇನಾ ಉದ್ಧವ್‌ ಬಣ ಆಗ್ರಹ

ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಅಕ್ರಮ ವಿವಾದ

ಪಿಟಿಐ
Published 17 ಜೂನ್ 2024, 15:37 IST
Last Updated 17 ಜೂನ್ 2024, 15:37 IST
   

ಮುಂಬೈ: ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತ ವಿವಾದವು ಸೋಮವಾರ ತೀವ್ರತೆ ಪಡೆದುಕೊಂಡಿದೆ. ‘ಅಕ್ರಮದ ಕುರಿತು ಎದ್ದಿರುವ ಸಂಶಯಗಳು ನಿವಾರಣೆಯಾಗದ ಹೊರತು ಶಿವಸೇನಾದ ರವೀಂದ್ರ ವಾಯ್ಕರ್‌ ಅವರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವುದನ್ನು ತಡೆಹಿಡಿಯಬೇಕು’ ಎಂದು ಶಿವಸೇನಾವು (ಉದ್ಧವ್‌ ಬಣ) ಆಗ್ರಹಿಸಿದೆ.

ವಾಯ್ಕರ್‌  ಅವರ ಗೆಲುವನ್ನು ಪ್ರಶ್ನಿಸಿ ಹಾಗೂ ಚುನಾವಣಾ ಆಯೋಗವು ತನ್ನ ಬಳಿ ದಾಖಲಾದ ದೂರುಗಳ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆ 48 ಮತಗಳಿಂದ ಪರಾಭವಗೊಂಡ ಶಿವಸೇನಾ ಉದ್ಧವ್‌ ಬಣದ ಅಮೋಲ್‌ ಕೀರ್ತಿಕರ್‌ ಅವರು ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಮತಎಣಿಕೆಯು ನೆಸ್ಕೊ ಪ್ರದರ್ಶನ ಕೇಂದ್ರದಲ್ಲಿ ನಡೆದಿತ್ತು. ಈ ಮತಎಣಿಕೆ ಕೇಂದ್ರದ ಚುನಾವಣಾಧಿಕಾರಿ  ವಂದನಾ ಸೂರ್ಯವಂಶಿ ಅವರ ವಿರುದ್ಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಇದೇ ಪಕ್ಷ‌ದ ನಾಯಕ ಅನಿಲ್‌ ಪರಬ್‌ ಚಿಂತನೆ ನಡೆಸಿದ್ದಾರೆ.

ಶಿವಸೇನಾದ (ಉದ್ಧವ್‌ ಬಣ) ನಾಯಕ ಆದಿತ್ಯ ಠಾಕ್ರೆ ಅವರು ಪತ್ರಿಕಾಗೋಷ್ಠಿ ನಡೆಸಿ, ‘ಆಡಳಿತಯಂತ್ರವನ್ನು ಬಳಸಿಕೊಂಡು ನಮ್ಮ ಅಭ್ಯರ್ಥಿಯ ಜಯವನ್ನು ಕಿತ್ತುಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಆಯೋಗವು ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ‘ಚುನಾವಣಾ ಅಕ್ರಮ’ದ ಕುರಿತು ಒಂದೆರಡು ದಿನಗಳಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಗೆಲುವು ಘೋಷಣೆ: ಶಂಕಾಸ್ಪದ’

‘ಫಾರಂ 17ಅನ್ನು ನಮಗೆ ನೀಡಿರಲಿಲ್ಲ. ಚುನಾವಣಾಧಿಕಾರಿ ಹಾಗೂ ಏಜೆಂಟರನ್ನು ದೂರ ಕೂರಿಸಲಾಗಿತ್ತು. ಇದರಿಂದ ಮತ ತಾಳೆಯು ಕಷ್ಟವಾಯಿತು. 19ನೇ ಸುತ್ತಿನ ಮತ ಎಣಿಕೆವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಅಲ್ಲಿಂದ ಮುಂದೆ ಮತ ಎಣಿಕೆ ಕಾರ್ಯವು ಪಾರದರ್ಶಕವಾಗಿ ಇರಲಿಲ್ಲ. 19ನೇ ಸುತ್ತಿನವರೆಗೆ ಶಿವಸೇನಾ ಅಭ್ಯರ್ಥಿ ವಾಯ್ಕರ್‌ ಅವರಿಗಿಂತ 650 ಮತಗಳ ಅಂತದಿಂದ ಮುಂದೆ ಇದ್ದೆವು. ಆದ್ದರಿಂದ, ಗೆಲುವು ಘೋಷಿಸಿರುವುದು ಹಲವು ಶಂಕೆಗೆ ದೂಡುತ್ತಿದೆ. ಆಡಳಿತಯಂತ್ರವನ್ನು ಬಳಸಿಕೊಂಡು ಅಕ್ರಮ ನಡೆಸಿರುವುದರ ಕುರಿತು ಜನಪ್ರಾತಿನಿಧ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ’ ಎಂದು ಶಿವಸೇನಾ (ಉದ್ಧವ್‌ ಬಣ) ನಾಯಕ ಅನಿಲ್‌ ಪರಬ್‌ ಅವರು ಆರೋಪಿಸಿದ್ದಾರೆ.

‘ಚುನಾವಣಾಧಿಕಾರಿ ಅವರಿಗೆ ನಿರಂತರವಾಗಿ ಕರೆಗಳು ಬರುತ್ತಿದ್ದವು. ಅವರು ಹೊರಗೆ ಹೋಗಿ ಬಂದು, ಕರೆಗಳನ್ನು ಸ್ವೀಕರಿಸಿರಬಹುದು. ಆದ್ದರಿಂದ ಈ ಬಗ್ಗೆಯೂ ತನಿಖೆ ನಡೆಸಿ’ ಎಂದೂ ಆಗ್ರಹಿಸಿದ್ದಾರೆ.

ವಿಲಾಸ್‌ ವಿರುದ್ಧ ದೂರು

ನೆಸ್ಕೊ ಮತ ಎಣಿಕೆ ಕೇಂದ್ರದ ಒಳಗೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಶಿವಸೇನಾದ (ಉದ್ಧವ್‌ ಬಣ) ಪರಿಷತ್‌ ಸದಸ್ಯ ವಿಲಾಸ್‌ ಪೋಟ್ನಿಸ್‌ ಹಾಗೂ ಅವರ ಖಾಸಗಿ ಭದ್ರತಾ ಸಿಬ್ಬಂದಿ ವಿರುದ್ಧ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 188 ಅಡಿಯಲ್ಲಿ ದೂರು ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ವಿಲಾಸ್‌ ಅವರು ಅಭ್ಯರ್ಥಿ ಅಮೋಲ್‌ ಕೀರ್ತಿಕರ್‌ ಅವರೊಂದಿಗೆ ಕೇಂದ್ರವನ್ನು ಪ್ರವೇಶಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಲಾಸ್‌ ಅವರು, ‘ತಿಳಿಯದೆಯೇ ಕೇಂದ್ರದ ಒಳಹೊಕ್ಕಿದ್ದೇನೆ. ಕೇಂದ್ರದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿತ್ತು. ಯಾವ ಸಿಬ್ಬಂದಿಯೂ ನನ್ನನ್ನು ತಡೆಯಲಿಲ್ಲ. ಚುನಾವಣಾಧಿಕಾರಿಯು ನನ್ನ ಹೆಸರನ್ನು ಕೂಗಿದ ತಕ್ಷಣವೇ ನಾನು ಕೇಂದ್ರದಿಂದ ಹೊರನಡೆದಿದ್ದೇನೆ’ ಎಂದರು.

ಇವಿಎಂ ಹಾಗೂ ಇದರ ಕಾರ್ಯವಿಧಾನವು ಸಂಪೂರ್ಣ ಪಾರದರ್ಶಕವಾಗಿದೆ ಎಂಬುದನ್ನು ಆಯೋಗವು ಖಚಿತ ಪಡಿಸಬೇಕು. ಇಲ್ಲವಾದಲ್ಲಿ ಈ ಯಂತ್ರದ ಬಳಕೆಯನ್ನು ನಿಷೇಧಿಸಬೇಕು. ಪ್ರಜಾಸತ್ತಾತ್ಮಕವಾದ ಎಲ್ಲ ಸಂಸ್ಥೆಗಳನ್ನು ಕೈವಶ ಮಾಡಿಕೊಂಡ ಈ ಹೊತ್ತಿನಲ್ಲಿ, ಸಾರ್ವಜನಿಕರಿಗೆ ಪಾರದರ್ಶಕವಾಗಿರುವ ಚುನಾವಣಾ ಪ್ರಕ್ರಿಯೆಯೊಂದೇ ಕೊನೆಯ ರಕ್ಷಣೆಯಾಗಿದೆ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ
ಈ ಚುನಾವಣೆಯ ಉದ್ದಕ್ಕೂ ಎಷ್ಟು ಇವಿಎಂಗಳು ದೋಷಪೂರಿತವಾಗಿದ್ದವು ಎಂಬುದನ್ನು ಮೊದಲು ಆಯೋಗ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಬೇಕು. ಎಷ್ಟು ಇವಿಎಂಗಳು ತಪ್ಪು ಸಮಯ, ದಿನಾಂಕವನ್ನು ತೋರಿಸಿವೆ? ಎಷ್ಟು ಮತಗಳು ಇವಿಎಂನಲ್ಲಿ ದಾಖಲಾಗಿವೆ? ಎಷ್ಟು ಕಂಟ್ರೋಲ್‌ ಯೂನಿಟ್‌ಗಳನ್ನು ಹಾಗೂ ಬ್ಯಾಲೆಟ್‌ ಯೂನಿಟ್‌ಗಳನ್ನು ಬದಲಾಯಿಸಲಾಗಿದೆ? ಅಣಕು ಮತದಾನದ ವೇಳೆ ಎಷ್ಟು ಇವಿಎಂಗಳಲ್ಲಿ ದೋಷ ಕಂಡುಬಂದಿತ್ತು?
-ಗೌರವ್‌ ಗೊಗೊಯ್‌, ಕಾಂಗ್ರೆಸ್‌ ನಾಯಕ
ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ ಹಾಗೂ ಇತರ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ 80 ಕ್ಷೇತ್ರಗಳ ಮತ ಎಣಿಕೆಯನ್ನು ಸರಿಯಾಗಿ ನಡೆಸಿದರೆ, ಈ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಸೋಲಲಿದೆ. ಆಗ ಈಗಿನ ಬಿಜೆಪಿ ಸರ್ಕಾರವು ಅಧಿಕಾರ ಕಳೆದುಕೊಳ್ಳಲಿದೆ. ಇವಿಎಂ ಕುರಿತು ಎದ್ದಿರುವ ವಿಚಾರಗಳ ಕುರಿತು ಸುಪ್ರೀಂ ಕೋರ್ಟ್‌ ಹಾಗೂ ಚುನಾವಣಾ ಆಯೋಗವು ಕಠಿಣ ನಿರ್ಧಾರ ಕೈಗೊಳ್ಳಬೇಕು
-ಸಂಜಯ್‌ ಸಿಂಗ್‌, ಎಎಪಿ ನಾಯಕ
ತನಿಖೆ ಪೂರ್ಣಗೊಳ್ಳುವವರೆಗೂ ವಾಯ್ಕರ್‌  ಅವರು ಸಂಸದರಾಗಿ ಪ್ರಮಾಣವಚನ ಪಡೆಯುವುದನ್ನು ತಡೆಯಬೇಕು. ಇದೇ ನಿಜವಾದ ಪ್ರಜಾಪ್ರಭುತ್ವ.
-ಸಂಜಯ್‌ ರಾವುತ್‌, ಶಿವಸೇನಾ (ಉದ್ಧವ್‌ ಬಣ) ನಾಯಕ 
ಒಂದು ವೇಳೆ ಇವಿಎಂ ಇಲ್ಲದೆ ನ್ಯಾಯಯುತವಾಗಿ ಚುನಾವಣೆಯನ್ನು ನಡೆಸಿದ್ದರೆ, ಬಿಜೆಪಿಯು 240 ಸ್ಥಾನಗಳನ್ನು ಅಲ್ಲ, 40 ಸ್ಥಾನಗಳನ್ನೂ ಗೆಲ್ಲುತ್ತಿರಲಿಲ್ಲ.
-ಆದಿತ್ಯ ಠಾಕ್ರೆ, ಶಿವಸೇನಾ (ಉದ್ಧವ್‌ ಬಣ) ನಾಯಕ
ಇವಿಎಂ ಹ್ಯಾಕ್‌ ಮಾಡಬಹುದಿದ್ದರೆ, ಕಾಂಗ್ರೆಸ್‌ ಇಷ್ಟು ಸ್ಥಾನ ಗೆಲ್ಲುತ್ತಿತ್ತೇ? ಸುಳ್ಳು ಸುದ್ದಿ ಹರಡುತ್ತಿರುವ ‘ಇಂಡಿಯಾ’ ನಾಯಕರು ಕ್ಷಮೆ ಕೇಳಬೇಕು
-ಸಂಜಯ್‌ ನಿರುಪಮ್‌, ಶಿವಸೇನಾ ನಾಯಕ
ನಮ್ಮ ಅಧಿಕಾರಿಗಳೊಬ್ಬರು ಬಳಸುತ್ತಿದ್ದ ಮೊಬೈಲ್‌ವೊಂದು ಅಕ್ರಮವಾಗಿ ಬೇರೊಬ್ಬರ ಕೈ ಸೇರಿದ್ದು ದುರದೃಷ್ಟಕರ. ಈ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ.
-ವಂದನಾ ಸೂರ್ಯವಂಶಿ, ಚುನಾವಣಾಧಿಕಾರಿ
ಒಟಿಪಿಯನ್ನು ಬಳಸಿಕೊಂಡು ಇವಿಎಂಗಳನ್ನು ತೆರೆಯಲಾಗಿದೆ ಎಂದು ನಮ್ಮ ಠಾಣೆಯ ಯಾವ ಅಧಿಕಾರಿಯೂ ಯಾರಿಗೂ ಮಾಹಿತಿ ನೀಡಿಲ್ಲ.
-ಠಾಣೆ ಅಧಿಕಾರಿಗಳು, ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವನರಾಯ್‌ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.