ADVERTISEMENT

ಪ್ರತಿಯೊಂದು ವರ್ಗ ಒಳಗೊಳ್ಳದೆ ದೇಶ ಮುನ್ನಡೆಸಲು ಸಾಧ್ಯವಿಲ್ಲ: ರಾಹುಲ್‌ ಗಾಂಧಿ

ಛತ್ತೀಸಗಡ: ರಾಷ್ಟ್ರೀಯ ಬುಡಕಟ್ಟು ನೃತ್ಯೋತ್ಸವದಲ್ಲಿ ರಾಹುಲ್‌ ಹೇಳಿಕೆ

ಪಿಟಿಐ
Published 27 ಡಿಸೆಂಬರ್ 2019, 13:45 IST
Last Updated 27 ಡಿಸೆಂಬರ್ 2019, 13:45 IST
ರಾಯಪುರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು     ಪಿಟಿಐ ಚಿತ್ರ
ರಾಯಪುರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು     ಪಿಟಿಐ ಚಿತ್ರ   

ರಾಯಪುರ : ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವುದಕ್ಕೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸಮಾಜದ ಪ್ರತಿಯೊಂದೂ ವರ್ಗವನ್ನು ಒಳಗೊಳ್ಳದೆದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

‘ಪ್ರತಿಯೊಂದು ಧರ್ಮದ ಮತ್ತು ಜಾತಿಯ, ಬುಡಕಟ್ಟು, ದಲಿತ ಹಾಗೂ ಹಿಂದುಳಿದ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗದಿದ್ದರೆ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವುದು ಅಸಾಧ್ಯ. ಕೇಂದ್ರ ಸರ್ಕಾರ ತನಗೆ ಬೇಕಾದುದನ್ನು ಮಾಡಲಿ, ಆದರೆ, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಮುನ್ನಡೆಯದಿದ್ದರೆ, ನಿರುದ್ಯೋಗ ಮತ್ತು ಆರ್ಥಿಕತೆಯ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಇಲ್ಲಿನ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ‘ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವ– 2019’ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕುರಿತ ಕೇಂದ್ರದ ಕ್ರಮದ ವಿರುದ್ಧ ಟೀಕಾಪ್ರಹಾರ ನಡೆಸಿರುವ ಅವರು, ಜನರು ತಮ್ಮ ತಮ್ಮ ನಡುವೆಯೇ ಹೊರಾಡುವಂತೆ ಮಾಡುವುದರಿಂದ ಏನನ್ನೂ ಸಾಧಿಸಲು ಆಗುವುದಿಲ್ಲ ಎಂದಿದ್ದಾರೆ.

‘ದೇಶದ ಇಂದಿನ ಸ್ಥಿತಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಿಎಎ ಮತ್ತು ಎನ್‌ಆರ್‌ಸಿಯಿಂದ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬುದು ಸಹ ಗೊತ್ತಿದೆ. ರೈತರ ಆತ್ಮಹತ್ಯೆ, ಅಧೋಗತಿಗಿಳಿದಿರುವ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೇ ವಿಷಯಗಳನ್ನು ಪದೇ ಪದೇ ಹೇಳುವ ಅಗತ್ಯವಿಲ್ಲ’ ಎಂದು ಹೇಳಿದರು.

ಬುಡಕಟ್ಟು ನೃತ್ಯ ಉತ್ಸವವನ್ನು ಆಯೋಜಿಸಿದ್ದಕ್ಕಾಗಿ ಕಾಂಗ್ರೆಸ್‌ ನೇತೃತ್ವದ ಛತ್ತೀಸಗಡ ಸರ್ಕಾರವನ್ನು ಶ್ಲಾಘಿಸಿದ ರಾಹುಲ್‌, ಇಂಥ ಕಾರ್ಯಕ್ರಮಗಳು ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುತ್ತವೆ ಎಂದರು.ಇದೇ ಸಂದರ್ಭದಲ್ಲಿ ಅವರು ಸಾಂಪ್ರದಾಯಿಕನೃತ್ಯಕ್ಕೆ ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.