ನವದೆಹಲಿ: ದೇಶವನ್ನು ಆರು ಮಂದಿ ಸೇರಿ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಕ್ರವ್ಯೂಹದ ಮೂಲಕ ಭಯವನ್ನು ಹಬ್ಬಿಸಿ, ರೈತರು, ಕಾರ್ಮಿಕರು ಸೇರಿ ಎಲ್ಲರೂ ಅದರೊಳಗೆ ಸಿಲುಕಿಕೊಳ್ಳುವ ಹಾಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಾವಿರಾರು ವರ್ಷಗಳ ಹಿಂದೆ ಹರಿಯಾಣದ ಕುರುಕ್ಷೇತ್ರದಲ್ಲಿ ಆರು ಮಂದಿ ಸೇರಿ ಅಭಿಮನ್ಯು ಎನ್ನುವ ಯುವಕನ್ನು ಕೊಲೆ ಮಾಡಿದರು. ಚಕ್ರವ್ಯೂಹ ಎಂದರೆ ಭಯ ಹಾಗೂ ಹಿಂಸೆ. ಅದರೊಳಗೆ ಸಿಲುಕಿಸಿ ಅಭಿಮನ್ಯುವನ್ನು ಕೊಂದು ಹಾಕಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಂದು ಆರು ಮಂದಿ ಸೇರಿ ಚಕ್ರವ್ಯೂಹ ರಚಿಸಿ ಅಭಿಮನ್ಯುವನ್ನು ಕೊಲೆ ಮಾಡಿದರು. ಇಂದು ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಉದ್ಯಮಪತಿಗಳಾದ ಅಂಬಾನಿ ಹಾಗೂ ಅದಾನಿ ಸೇರಿ ಚಕ್ರವ್ಯೂಹ ರಚಿಸಿಕೊಂಡಿದ್ದಾರೆ’ ಎಂದು ಟೀಕಿಸಿದ್ದಾರೆ.
‘ಚಕ್ರವ್ಯೂಹವನ್ನು ಪದ್ಮವ್ಯೂಹವೆಂದೂ ಕರೆಯುತ್ತಾರೆ. ಅದು ಕಮಲದ ಹೂವಿನ ಹಾಗೆ ಕಾಣಿಸುತ್ತದೆ. ಕಮಲದ ಹೂವಿನ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ಎದೆಗೆ ಸಿಲುಕಿಸಿಕೊಂಡು ಓಡಾಡುತ್ತಾರೆ. ಅಭಿಮನ್ಯುವಿಗೆ ಮಾಡಿದ ಹಾಗೆ ಇಂದು ಯುವಕರ, ಮಹಿಳೆಯರ, ರೈತರ ಹಾಗೂ ಉದ್ದಿಮೆಗಳ ಮೇಲೆ ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ನೀವು ಚಕ್ರವ್ಯೂಹವನ್ನು ರಚಿಸುತ್ತೀರಿ. ನಾವು ಅದನ್ನು ಬೇಧಿಸುತ್ತೇವೆ. ಜಾತಿಗಣತಿ ಮಾಡುವ ಮೂಲಕ ಚಕ್ರವ್ಯೂಹವನ್ನು ಬೇಧಿಸುತ್ತೇವೆ. ಏಕಚಕ್ರಾಧಿಪತ್ಯ ಬಂಡವಾಳ ಹಾಗೂ ಆರ್ಥಿಕ ಶಕ್ತಿಯ ಕೇಂದ್ರೀಕರಣ; ಸಂಸ್ಥೆಗಳಾದ ಐಟಿ, ಇ.ಡಿ, ಸಿಬಿಐ; ರಾಜಕೀಯ ಅಧಿಕಾರ ಈ ಮೂರು ಭಾರತವನ್ನು ತನ್ನ ಕೈಯೊಳಗೆ ಮಾಡಿಕೊಂಡ ಚಕ್ರವ್ಯೂಹದಲ್ಲಿ ಸೇರಿಕೊಂಡಿವೆ’ ಎಂದು ಅವರು ನುಡಿದಿದ್ದಾರೆ.
‘ಈ ಬಜೆಟ್, ಚಕ್ರವ್ಯೂಹವನ್ನು ದುರ್ಬಲಗೊಳಿಸಿ, ರೈತರಿಗೆ, ಕಾರ್ಮಿಕರಿಗೆ ಹಾಗೂ ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆಗಳಿಗೆ ಸಹಾಯಕವಾಗಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಏಕಸ್ವಾಮ್ಯ ವ್ಯಾಪಾರ, ರಾಜಕೀಯ ಏಕಸ್ವಾಮ್ಯ ಮತ್ತು ಏಜೆನ್ಸಿಗಳ ಚೌಕಟ್ಟನ್ನು ಬಲಪಡಿಸುವುದು ಮಾತ್ರ ಈ ಬಜೆಟ್‌ನ ಗುರಿಯಾಗಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿಯ ‘ಚಕ್ರವ್ಯೂಹ’ವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಾಶ ಮಾಡಿದೆ. ಇದನ್ನು ನೋಟು ಅಮಾನ್ಯೀಕರಣ ಮತ್ತು ತೆರಿಗೆ ಭಯೋತ್ಪಾದನೆಯ ಮೂಲಕ ಮಾಡಲಾಗಿದೆ. ತೆರಿಗೆ ಭಯೋತ್ಪಾದನೆಯನ್ನು ಕೊನೆಗಾಣಿಸಲು ಈ ಬಜೆಟ್‌ನಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಹಣಕಾಸು ಸಚಿವರು ಒಂದೂ ಮಾತು ಆಡಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.