ನವದೆಹಲಿ: ಸೈಬರ್ ಭದ್ರತೆ ದೇಶದ ಭದ್ರತೆಯ ಅವಿಭಾಜ್ಯ ಅಂಗವಾಗಿದೆ. ಸೈಬರ್ ಭದ್ರತೆ ಇಲ್ಲದಿದ್ದರೆ ದೇಶದ ಪ್ರಗತಿ ಅಸಾಧ್ಯ ಎಂದು ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದರು.
14 ಸಿ ಅಥವಾ ‘ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ’ದ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾ, ‘ಸೈಬರ್ ಅಪರಾಧಗಳಿಗೆ ಗಡಿ ಇಲ್ಲ. ಆದ್ದರಿಂದ ಅಪಾಯವನ್ನು ಎದುರಿಸಲು ಒಗ್ಗೂಡುವುದು ಅಗತ್ಯವಾಗಿದೆ’ ಎಂದು ಹೇಳಿದರು.
‘ಭಾರತದಲ್ಲಿನ ಸೈಬರ್ ಅಪರಾಧಗಳನ್ನು ತಡೆಯಲು ಮುಂದಿನ ಐದು ವರ್ಷಗಳಲ್ಲಿ 5 ಸಾವಿರ ಸೈಬರ್ ಕಮಾಂಡೊಗಳಿಗೆ ತರಬೇತಿ ನೀಡುವ ಬಗ್ಗೆ ಸರ್ಕಾರ ಯೋಜಿಸಿದೆ. ಜಗತ್ತಿನ ಶೇ 47ರಷ್ಟು ಡಿಜಿಟಲ್ ವ್ಯವಹಾರಗಳು ಭಾರತದಲ್ಲೇ ನಡೆಯುತ್ತವೆ. ಹೀಗಾಗಿ ಸೈಬರ್ ಭದ್ರತೆ ಅತಿ ಅಗತ್ಯವಾದುದು’ ಎಂದು ಪುನರುಚ್ಚರಿಸಿದರು.
ಕಾರ್ಯಕ್ರಮದಲ್ಲಿ ಶಾ, ದೇಶದಲ್ಲಿ ಸೈಬರ್ ಅಪರಾಧ ತಡೆಗೆ ಹೊಸದಾಗಿ ನಾಲ್ಕು ಪ್ಲಾಟ್‌ಫಾರ್ಮ್‌ಗಳನ್ನು ಉದ್ಘಾಟಿಸಿದರು.
ಕೇಂದ್ರ ಗೃಹ ಸಚಿವಾಲಯವು ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು 2018ರಲ್ಲಿ ಸ್ಥಾಪಿಸಿದೆ. ದೇಶದಲ್ಲಿ ನಡೆಯುವ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರಮಟ್ಟದಲ್ಲಿ ಸಮನ್ವಯ ಸಾಧಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.