ADVERTISEMENT

ದಂಪತಿ ಜಗಳ: ದೆಹಲಿಯಲ್ಲಿ ಇಳಿದ ಜರ್ಮನಿಯಿಂದ ಬ್ಯಾಂಕಾಕ್‌ಗೆ ಹೊರಟಿದ್ದ ವಿಮಾನ

ಪಿಟಿಐ
Published 29 ನವೆಂಬರ್ 2023, 11:31 IST
Last Updated 29 ನವೆಂಬರ್ 2023, 11:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

(ರಾಯಿಟರ್ಸ್)

ನವದೆಹಲಿ: ದಂಪತಿ ಮಧ್ಯೆ ವಾಗ್ವಾದ ನಡೆದ ಕಾರಣ ಮ್ಯೂನಿಚ್‌–ಬ್ಯಾಂಕಾಕ್‌ ತಲುಪಬೇಕಿದ್ದ ಲುಫ್ತಾನ್ಸಾ ವಿಮಾನವು ಮಾರ್ಗ ಬದಲಿಸಿ ಬುಧವಾರ ನವದೆಹಲಿಯಲ್ಲಿ ಇಳಿಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

‘ವಿಮಾನವು ಟೇಕ್‌ಆಫ್‌ ಆದ ನಂತರ ಜರ್ಮನಿ ಮೂಲದ ವ್ಯಕ್ತಿ ಮತ್ತು ಥಾಯ್ಲೆಂಡ್‌ ಮೂಲದ ಅವರ ಪತ್ನಿ ನಡುವೆ ವಾಗ್ವಾದ ನಡೆದಿದ್ದು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಪೈಲಟ್‌ಗಳು ಏರ್‌ಟ್ರಾಫಿಕ್‌ ಕಂಟ್ರೋಲ್‌ (ಎಟಿಸಿ) ಸಂಪರ್ಕಿಸಿ ಪರಿಸ್ಥಿತಿ ವಿವರಿಸಿ ದೆಹಲಿಯಲ್ಲಿ ವಿಮಾನ ಇಳಿಸಲು ಅನುಮತಿ ಪಡೆದರು. ನಂತರ ವಿಮಾನವು ಬೆಳಿಗ್ಗೆ 10.26ಕ್ಕೆ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿತು’ ಎಂದು ತಿಳಿಸಿವೆ.

‘ಪ್ರಯಾಣಿಕರೊಬ್ಬರು ಅಶಿಸ್ತಿನ ವರ್ತನೆ ತೋರಿದ್ದರಿಂದ ವಿಮಾನವು ದೆಹಲಿಯತ್ತ ಮಾರ್ಗ ಬದಲಾಯಿಸಿತು’ ಎಂದು ಲುಫ್ತಾನ್ಸಾ ವಿಮಾನಯಾನ ಸಂಸ್ಥೆ ತಿಳಿಸಿದೆ.

ಮೊದಲಿಗೆ, ಪತಿಯು ತಮಗೆ ಬೆದರಿಕೆವೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿಯು ಪೈಲಟ್ ಬಳಿ ದೂರಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘53 ವರ್ಷದ ಜರ್ಮನಿ ಮೂಲದ ಪ್ರಯಾಣಿಕ ಆಹಾರವನ್ನು ಎಸೆದು, ಲೈಟರ್‌ ಬಳಸಿ ಹೊದಿಕೆಯನ್ನು ಸುಟ್ಟುಹಾಕುವುದಾಗಿ ಬೆದರಿಸಿದರು, ಪತ್ನಿಯ ಮೇಲೆ ಕಿರುಚಾಡಿದರು. ವಿಮಾನ ಸಿಬ್ಬಂದಿಯ ಸೂಚನೆಯನ್ನೂ ಪಾಲಿಸಲಿಲ್ಲ. ಹೀಗಾಗಿ ಪೈಲಟ್‌ ವಿಮಾನದ ಮಾರ್ಗ ಬದಲಾಯಿಸಿದರು. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ದೆಹಲಿಯಲ್ಲಿ ವ್ಯಕ್ತಿಯನ್ನು ವಿಮಾನದಿಂದ ಕೆಳಗಿಳಿಸಿದರು. ಅವರ ಪತ್ನಿ ಬ್ಯಾಂಕಾಕ್‌ಗೆ ಪ್ರಯಾಣ ಮುಂದುವರಿಸಿದರು’ ಎಂದು ಮೂಲಗಳು ತಿಳಿಸಿವೆ.

ಆರೋಪಿಯನ್ನು ದೆಹಲಿ ಪೊಲೀಸರಿಗೆ ಒಪ್ಪಿಸಬೇಕೇ, ಅವರ ಕ್ಷಮೆಯನ್ನು ಪರಿಗಣಿಸಬೇಕೇ ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದೂ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.