ADVERTISEMENT

ಶಿಕ್ಷಣ ಕ್ಷೇತ್ರದ ಪರಿಣತರಂತೆ ಕೋರ್ಟ್‌ ವರ್ತಿಸಲಾಗದು: ಸುಪ್ರೀಂ

ಶಿಕ್ಷಕ ಅಭ್ಯರ್ಥಿಗಳ ವಿದ್ಯಾರ್ಹತೆ ಸಂಸ್ಥೆಗಳ ವಿವೇಚನೆಗೆ ಬಿಡಬೇಕು: ಸುಪ್ರೀಂ ಕೋರ್ಟ್‌

ಪಿಟಿಐ
Published 17 ಏಪ್ರಿಲ್ 2022, 10:25 IST
Last Updated 17 ಏಪ್ರಿಲ್ 2022, 10:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಶಿಕ್ಷಣ ಕ್ಷೇತ್ರದ ಪರಿಣತರಂತೆ ಕೋರ್ಟ್‌ ವರ್ತಿಸಲಾಗದು. ಶಿಕ್ಷಕ ಹುದ್ದೆಯ ಅಭ್ಯರ್ಥಿಗೆ ಅರ್ಹ ವಿದ್ಯಾರ್ಹತೆ ಇದೆಯೇ, ಇಲ್ಲವೇ ಎಂದು ನಿರ್ಧರಿಸುವುದನ್ನು ಆಯಾ ಸಂಸ್ಥೆಗಳ ವಿವೇಚನೆಗೆ ಬಿಡಬೇಕು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನಿರ್ದಿಷ್ಟ ಹುದ್ದೆಗಳಿಗೆ ಸಂಬಂಧಿಸಿದಂತೆ ಜಾಹೀರಾತುವಿನಲ್ಲಿ ಉಲ್ಲೇಖಿಸಿದ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಇರಬಾರದು ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠವು ಅಭಿಪ್ರಾಯಪಟ್ಟಿತು.

‘ಸಂಬಂಧಿತ ವಿಷಯ ಕುರಿತಂತೆ ತಜ್ಞರ ಸಮಿತಿ ಇರುವಾಗ, ವಿದ್ಯಾರ್ಹತೆ ಕುರಿತ ತೀರ್ಮಾನವನ್ನು ಆಯಾ ಸಂಸ್ಥೆಗಳ ವಿವೇಚನೆಗೇ ಬಿಡಬೇಕು. ಆದರೆ, ಸಂಬಂಧಿತ ಜಾಹೀರಾತಿನಲ್ಲಿ ಉಲ್ಲೇಖಿಸಿದಂತೆ ಅಭ್ಯರ್ಥಿಯು ವಿದ್ಯಾರ್ಹತೆ ಹೊಂದಿರುವುದು ಅಗತ್ಯ’ ಎಂದಿತು.

ADVERTISEMENT

ಜಾರ್ಖಂಡ್‌ನಲ್ಲಿ ಪ್ರೌಢಶಾಲೆಗಳಿಗೆ ಸ್ನಾತಕೋತ್ತರ ಪದವಿ ತರಬೇತುನಿರತ ಉಪಾಧ್ಯಾಯರ ನೇಮಕ ಪ್ರಕ್ರಿಯೆಯನ್ನು ಕುರಿತಂತೆ ಅಲ್ಲಿನ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಕೋರ್ಟ್‌ ಈ ಅಭಿಪ್ರಾಯ ತಿಳಿಸಿತು.

ಚರಿತ್ರೆಗೆ ಸಂಬಂಧಿಸಿದಂತೆ ಒಂದು ವಿಭಾಗದಲ್ಲಿ ಪದವಿ ಪಡೆದಿರುವುದನ್ನು, ಈ ಕೋರ್ಸ್‌ಗೆ ಸಂಬಂಧಿಸಿದಂತೆ ಪೂರ್ಣವಾಗಿ ಪದವಿ ಪಡೆಯಲಾಗಿದೆ ಎಂದು ಪರಿಗಣಿಸಲಾಗದು ಎಂದು ಕೋರ್ಟ್ ಸ್ಪಷ್ಟಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.