ADVERTISEMENT

ಶಾಸಕರ ಅನರ್ಹತೆ | ನನಗೆ ನಿರ್ದೇಶಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ: ನಾರ್ವೇಕರ್‌

ಪಿಟಿಐ
Published 11 ಜುಲೈ 2023, 13:23 IST
Last Updated 11 ಜುಲೈ 2023, 13:23 IST
ರಾಹುಲ್‌ ನಾರ್ವೇಕರ್‌
ರಾಹುಲ್‌ ನಾರ್ವೇಕರ್‌   

ಮುಂಬೈ: ‘ಶಾಸಕರ ಅನರ್ಹತೆ ಬಗ್ಗೆ ನಿರ್ಧಾರ ಕೈಗೊಳ್ಳಲು ಸುಪ್ರೀಂ ಕೋರ್ಟ್‌ ನನಗೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ. ಅಂತಹ ಅಧಿಕಾರವೂ ಅದಕ್ಕಿಲ್ಲ’ ಎಂದು ಮಹಾರಾಷ್ಟ್ರದ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಹೇಳಿದ್ದಾರೆ.

ಶಾಸಕರ ಅನರ್ಹತೆ ಅರ್ಜಿ ಕುರಿತಂತೆ ಸ್ಪೀಕರ್ ಅವರೇ ನಿಗದಿತ ಅವಧಿಯೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಹೇಳಿದೆ.

ಈ ನಡುವೆಯೇ ‌ಮುಖ್ಯಮಂತ್ರಿ ಏಕನಾಥ ಶಿಂದೆ ಸೇರಿದಂತೆ ಅವರ ಬಣದ 16 ಶಾಸಕರ ಅನರ್ಹತೆ ಪ್ರಕ್ರಿಯೆಗೆ ಸ್ಪೀಕರ್‌ ವಿಳಂಬ ಧೋರಣೆ ತಳೆದಿದ್ದಾರೆ. ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಅವರಿಗೆ ಸೂಚಿಸಬೇಕು ಎಂದು ಶಿವಸೇನಾದ(ಯುಬಿಟಿ) ಮುಖ್ಯ ವಿಪ್‌ ಆಗಿರುವ ಶಾಸಕ ಸುನಿಲ್‌ ಪ್ರಭು ಅವರು ಕಳೆದ ವಾರ ‘ಸುಪ್ರೀಂ’ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.   

ADVERTISEMENT

ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಾರ್ವೇಕರ್, ‘ಜನತಂತ್ರ ವ್ಯವಸ್ಥೆಯಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗ ಎರಡೂ ಪ್ರತ್ಯೇಕವಾಗಿವೆ. ಸ್ಪೀಕರ್‌ ಕ್ರಮ ತೆಗೆದುಕೊಳ್ಳುತ್ತಾರೆ ಎಂದಷ್ಟೇ ಕೋರ್ಟ್‌ ಹೇಳಬಹುದು. ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಸ್ಪೀಕರ್‌ಗೆ ನಿರ್ದೇಶಿಸುವ ಅಧಿಕಾರ ಅದಕ್ಕಿಲ್ಲ. ಒಂದು ವೇಳೆ ಸೂಚಿಸಿದರೂ ಅದನ್ನು ತಿರಸ್ಕರಿಸುವ ಅಧಿಕಾರ ಸ್ಪೀಕರ್‌ಗೆ ಇದೆ’ ಎಂದು ಸ್ಪಷ್ಟಪಡಿಸಿದರು.

ಪ್ರಕರಣದ ಇತ್ಯರ್ಥಕ್ಕೆ ಎಷ್ಟು ಸಮಯ ಹಿಡಿಯಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಹಾರಾಷ್ಟ್ರದಲ್ಲಿ ಹಿಂದೆಂದೂ ಕಂಡರಿಯದಂತಹ ಘಟನೆಗಳು ನಡೆಯುತ್ತಿವೆ. ಈ ಸಂಬಂಧ ಇತರ ರಾಜ್ಯಗಳಲ್ಲಿನ ಯಾವುದೇ ಪ್ರಕರಣಗಳನ್ನು ಮಾನದಂಡವಾಗಿ  ಪರಿಗಣಿಸುವುದಿಲ್ಲ’ ಎಂದು ಹೇಳಿದರು.

‘ಈಗಾಗಲೇ, ಶಿಂದೆ ಮತ್ತು ಉದ್ಧವ್‌ ಬಣದ ಶಾಸಕರಿಗೆ ನೋಟಿಸ್‌ ನೀಡಲಾಗಿದೆ. ಅಗತ್ಯವಿದ್ದರೆ ಅಭಿಪ್ರಾಯ ಸಲ್ಲಿಸಲು ಹೆಚ್ಚುವರಿ ಸಮಯಾವಕಾಶವನ್ನೂ ನೀಡಲಾಗುವುದು. ಆ ಬಳಿಕವಷ್ಟೇ ನಿರ್ಧಾರಕೈಗೊಳ್ಳುತ್ತೇನೆ. ನೋಟಿಸ್‌ಗೆ ಶಾಸಕರು ಸಲ್ಲಿಸುವ ಉತ್ತರದ ಅನುಸಾರ ಕ್ರಮವಹಿಸುತ್ತೇನೆ’ ಎಂದು ತಿಳಿಸಿದರು.

ಉದ್ಧವ್‌ಗೆ ಕಲ್ಲೇಟಿನ ಉತ್ತರ: ಬಿಜೆಪಿ ಎಚ್ಚರಿಕೆ

ನಾಗ್ಪುರ (ಪಿಟಿಐ): ‘ಉದ್ಧವ್‌ ಠಾಕ್ರೆ ಅವರು ಡಿಸಿಎಂ ದೇವೇಂದ್ರ ಫಡಣವೀಸ್‌ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಬಗ್ಗೆ ಅವಮಾನಕರವಾಗಿ ಮಾತನಾಡುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ಅವರಿಗೆ ಕಲ್ಲೇಟಿನ ಮೂಲಕ ಉತ್ತರ ನೀಡುತ್ತೇವೆ’ ಎಂದು ಮಹಾರಾಷ್ಟ್ರದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವನಕುಲೆ ಎಚ್ಚರಿಸಿದ್ದಾರೆ.

‘ನಮ್ಮ ಹೋರಾಟದಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಬಿಜೆಪಿ ಹೊಣೆಯಲ್ಲ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಫಡಣವೀಸ್ ಅವರನ್ನು ಕಳಂಕಿತ ವ್ಯಕ್ತಿ ಎಂದು ಉದ್ಧವ್‌ ಟೀಕಿಸಿದ್ದಾರೆ. ಆದರೆ, ಅವರೇ ಕಳಂಕಿತ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ನಾಯಕರನ್ನು ಅವಮಾನಿಸುವ ಪ್ರವೃತ್ತಿ ಮುಂದುವರಿಸಿದರೆ ನಾವು ಸುಮ್ಮನಿರುವುದಿಲ್ಲ. ಅವರು ಪ್ರವಾಸಕ್ಕೆ ಹೋದ ಕಡೆಯಲ್ಲೆಲ್ಲ ಪ್ರತ್ಯುತ್ತರ ನೀಡುತ್ತೇವೆ’ ಎಂದು ಗುಡುಗಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.