ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘನೆ ಆರೋಪದಡಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಅಧ್ಯಕ್ಷ ಆಕಾರ್ ಪಟೇಲ್ ವಿರುದ್ಧ ಹೊರಡಿಸಲಾಗಿರುವ ಲುಕ್‌ಔಟ್ ನೋಟಿಸ್ ಅನ್ನು (ಎಲ್‌ಒಸಿ) ಹಿಂಪಡೆಯುವಂತೆ ಸಿಬಿಐಗೆ ದೆಹಲಿ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
ಅಲ್ಲದೇ, ಈ ‘ಲೋಪ’ಕ್ಕಾಗಿ ಆಕಾರ್ ಪಟೇಲ್ ಅವರಲ್ಲಿ ಲಿಖಿತರೂಪದಲ್ಲಿ ಕ್ಷಮೆ ಕೇಳುವಂತೆ ಸಿಬಿಐ ನಿರ್ದೇಶಕರಿಗೆ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್‌ಕುಮಾರ್ ಸೂಚಿಸಿದರು.
‘ಸಮರ್ಪಕ ಆಧಾರಗಳಿಲ್ಲದೇ 2021ರ ಡಿಸೆಂಬರ್ 31ರಂದು ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ. ತನಿಖೆ ಪ್ರಗತಿಯಲ್ಲಿ ಇರುವಾಗ ಅವರನ್ನು ಬಂಧಿಸಿಲ್ಲ. ತಮಗೆ ನೋಟಿಸ್ ನೀಡಿದಾಗಲೆಲ್ಲಾ ಅವರು ವಿಚಾರಣೆಗೂ ಹಾಜರಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
ವಿದೇಶ ಪ್ರಯಾಣ ಕೈಗೊಂಡರೆ ಪಟೇಲ್ ಅವರು ತನಿಖೆಯಿಂದ ತಪ್ಪಿಸಿಕೊಳ್ಳುತ್ತಾರೆ ಎಂಬ ಸಿಬಿಐನ ಗುಮಾನಿಗೆ ಯಾವುದೇ ಆಧಾರ ಇಲ್ಲ. ಹೀಗಾಗಿ ಅವರ ವಿರುದ್ಧದ ಲುಕ್‌ಔಟ್ ನೋಟಿಸ್ ಅನ್ನು ತಕ್ಷಣವೇ ಹಿಂಪಡೆಯಬೇಕು ಎಂದು ನ್ಯಾಯಾಧೀಶರು ಸೂಚಿಸಿದರು
ವಿವಿಧ ವಿಶ್ವವಿದ್ಯಾಲಯಗಳು ಆಯೋಜಿಸಿದ್ದ ಸರಣಿ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಪ್ರಯಾಣಿಸಲಿದ್ದ ಪಟೇಲ್ ಅವರನ್ನುವಲಸೆ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ತಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.