ಹೈದರಾಬಾದ್: ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡದಂತೆ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರಿಗೆ ಸ್ಥಳೀಯ ನ್ಯಾಯಾಲಯ ನಿರ್ದೇಶನ ನೀಡಿದೆ.
ಕೊಂಡಾ ಸುರೇಖಾ ವಿರುದ್ಧ ಕೆ.ಟಿ. ರಾಮರಾವ್ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಕುರಿತು ನ್ಯಾಯಾಲಯ ಇಂದು (ಶನಿವಾರ) ವಿಚಾರಣೆ ನಡೆಸಿದೆ.
ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ವಿಚ್ಛೇದನಕ್ಕೆ ಬಿಆರ್‌ಎಸ್ ನಾಯಕ ಕೆ.ಟಿ. ರಾಮರಾವ್ ಕಾರಣ ಎಂದು ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರು ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇದು ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಆರ್‌ಎಸ್ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು.
ಈ ವಿಷಯದ ಕುರಿತು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾದ ಮಾನಹಾನಿಕರ ಲೇಖನಗಳು ಮತ್ತು ವಿಡಿಯೊಗಳನ್ನು ತೆಗೆದುಹಾಕುವಂತೆ ದಿನ ಪತ್ರಿಕೆಗಳು, ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಸುರೇಖಾ ವಿರುದ್ಧ ನಟ ನಾಗಾರ್ಜುನ ಕೂಡ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ನಾಗಾರ್ಜುನ ಮತ್ತು ರಾಮರಾವ್ ಇಬ್ಬರೂ ಈಗಾಗಲೇ ತಮ್ಮ ಮಾನನಷ್ಟ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ಹೇಳಿಕೆಗಳನ್ನು ದಾಖಲಿಸಿದ್ದಾರೆ.
‘ನಟಿ ಸಮಂತಾ ರುತ್ ಪ್ರಭು ಹಾಗೂ ನಟ ನಾಗಚೈತನ್ಯ ಅವರ ವಿಚ್ಛೇದನಕ್ಕೆ ಬಿಆರ್‌ಎಸ್ ಅಧ್ಯಕ್ಷ ಕೆ.ಟಿ. ರಾಮ್ ರಾವ್ ಕಾರಣ’ ಎಂದು ತೆಲಂಗಾಣದ ಸಚಿವೆ ಕೊಂಡಾ ಸುರೇಖಾ ಅವರು ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದಿದ್ದರು.
‘ನನ್ನ ವಿರುದ್ಧ ಕೆಟಿಆರ್ ಹಾಗೂ ಅವರ ಪಕ್ಷದ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಅಭಿರುಚಿಯ ಕಮೆಂಟ್‌ಗಳನ್ನು ಮಾಡುತ್ತಿದ್ದರು. ಈ ಬಗ್ಗೆ ಮಾತನಾಡುತ್ತಾ ಭಾವುಕಳಾದೆ. ಇದೇ ಕಾರಣಕ್ಕೆ ಸಮಂತಾ ಅವರ ಹೆಸರು ಹೇಳಿಬಿಟ್ಟೆ. ನಾನು ಕೆಟಿಆರ್ ಅವರನ್ನು ಟೀಕಿಸಬೇಕಿತ್ತು. ನಟಿಯ ಬಗ್ಗೆ ನನಗೆ ವೈಯಕ್ತಿಕ ಸಮಸ್ಯೆಗಳು ಏನೂ ಇಲ್ಲ. ಆಕೆಯ ಇನ್‌ಸ್ಟಾಗಾಂ ಪೋಸ್ಟ್ ಅನ್ನು ಬುಧವಾರ ರಾತ್ರಿ ನೋಡಿದೆ. ನನಗೆ ಬಹಳ ನೋವಾಯಿತು. ಬೇಷರತ್ತಾಗಿ ನನ್ನ ಹೇಳಿಕೆಯನ್ನು ವಾಪಸು ಪಡೆದು ಪೋಸ್ಟ್ ಹಾಕಿದ್ದೇನೆ’ ಎಂದು ಸಚಿವೆ ಕೊಂಡಾ ಸುರೇಖಾ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.