ನವದೆಹಲಿ: ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಪತ್ರಕರ್ತ ಮೊಹಮ್ಮದ್ ಜುಬೇರ್ ಪೊಲೀಸ್ ಕಸ್ಟಡಿ, ವಿಚಾರಣೆಯನ್ನು ದೆಹಲಿ ನ್ಯಾಯಾಲಯ ನಾಲ್ಕು ದಿನ ವಿಸ್ತರಣೆ ಮಾಡಿದೆ.
ದೆಹಲಿ ಪೊಲೀಸರ ವಾದ ಆಲಿಸಿದ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧ ಸರ್ವಾರಿಯಾ ಅವರು ಆರೋಪಿಯ ಪೊಲೀಸ್ ಕಸ್ಟಡಿ ವಿಸ್ತರಣೆ ಮಾಡಿ ಆದೇಶ ನೀಡಿದರು.
ಜುಬೇರ್ ಅವರನ್ನು ಐದು ದಿನಗಳ ಕಾಲ ವಶಕ್ಕೊಪ್ಪಿಸಬೇಕೆಂದು ಪೊಲೀಸರು ಮನವಿ ಮಾಡಿದ್ದರು.
ಫ್ಯಾಕ್ಟ್ ಚೆಕಿಂಗ್ ವೆಬ್‌ಸೈಟ್ 'ಆಲ್ಟ್ ನ್ಯೂಸ್' ಸಹ ಸಂಸ್ಥಾಪಕರಾಗಿರುವ ಜುಬೇರ್ ಅವರನ್ನು ಸೋಮವಾರ ಬಂಧಿಸಲಾಗಿತ್ತು.
ಜುಬೇರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153ಎ (ಧಾರ್ಮಿಕ, ಜನಾಂಗೀಯ, ಹುಟ್ಟಿದ ಸ್ಥಳ, ಭಾಷೆಯ ಹಿನ್ನೆಯಲ್ಲಿ ಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಹರಡುವುದು) ಹಾಗೂ 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ) ಅಡಿಯಲ್ಲಿ ಈ ತಿಂಗಳ ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು ಎಂದು ದೆಹಲಿ ಸೈಬರ್ ಸೆಲ್ ಡಿಸಿಪಿ ಕೆ.ಪಿ.ಎಸ್.ಮಲ್ಹೋತ್ರಾ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.