ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸುಕೇಶ್‌ ಆಪ್ತೆ ಪಿಂಕಿ ಇರಾನಿಗೆ ಜಾಮೀನು ಮಂಜೂರು 

ಪಿಟಿಐ
Published 16 ಫೆಬ್ರುವರಿ 2022, 15:20 IST
Last Updated 16 ಫೆಬ್ರುವರಿ 2022, 15:20 IST
ಜಾರಿ ನಿರ್ದೇಶನಾಲಯ (ಇ.ಡಿ)
ಜಾರಿ ನಿರ್ದೇಶನಾಲಯ (ಇ.ಡಿ)    

ನವದೆಹಲಿ: ₹200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್‌ಗೆ ನೆರವು ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಪಿಂಕಿ ಇರಾನಿ ಅವರಿಗೆ ದೆಹಲಿಯ ಸ್ಥಳೀಯ ಕೋರ್ಟ್‌ ಬುಧವಾರ ಜಾಮೀನು ಮಂಜೂರು ಮಾಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಡಿ.9ರಂದು ಪಿಂಕಿ ಇರಾನಿ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಬಂಧಿಸಿದ್ದರು.

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರಿಗೆ ಸುಕೇಶ್‌ ಚಂದ್ರಶೇಖರ್‌ ಅವರನ್ನು ಪರಿಚಯಿಸಿದ ಆರೋಪ ಪಿಂಕಿ ಇರಾನಿ ಅವರ ಮೇಲಿದೆ. ಜತೆಗೆ, ಫರ್ನಾಂಡಿಸ್‌ ಸೇರಿದಂತೆ ಹಲವು ನಟಿಯರಿಗೆ ದುಬಾರಿ ಬೆಲೆಯ ಉಡುಗೊರೆಗಳನ್ನು ತಲುಪಿಸಲು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.

ADVERTISEMENT

ಫೋರ್ಟಿಸ್‌ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಶಿವಿಂದರ್‌ ಮೋಹನ್‌ ಸಿಂಗ್‌ ಅವರ ಪತ್ನಿ ಅದಿತಿ ಸಿಂಗ್‌ ಅವರಿಗೆ ₹200 ಕೋಟಿ ವಂಚಿಸಿ, ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ನಟಿ ಲೀನಾ ಮಾರಿಯಾ ಪಾಲ್‌ ಹಾಗೂ ಪತಿ ಸುಕೇಶ್‌ ಚಂದ್ರಶೇಖರ್‌ ವಿರುದ್ಧ ಇದೆ.

2021ರ ಆಗಸ್ಟ್‌ನಲ್ಲಿ ಚೆನ್ನೈನಲ್ಲಿರುವ ಚಂದ್ರಶೇಖರ್‌ಗೆ ಸೇರಿದ ಮನೆ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನಡೆಸಿದ ದಾಳಿ ಸಂದರ್ಭದಲ್ಲಿ ₹ 82.5 ಲಕ್ಷ ನಗದು, 2 ಕೆ.ಜಿ ಚಿನ್ನ ಹಾಗೂ 16 ಐಷಾರಾಮಿ ಕಾರುಗಳು ಮತ್ತು ಇತರ ದುಬಾರಿ ಬೆಲೆಯ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.

ಚಂದ್ರಶೇಖರ್‌ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ ಅಧಿಕಾರಿಗಳು ಈಗಾಗಲೇ ಬಾಲಿವುಡ್‌ ನಟಿಯರಾದ ಜಾಕ್ವೆಲಿನ್‌ ಫರ್ನಾಂಡಿಸ್‌, ನೋರಾ ಫತೇಹಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಚಂದ್ರಶೇಖರ್ ನಡೆಸಿರುವ ಬಹುಕೋಟಿ ಸುಲಿಗೆ ದಂಧೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್‌ ಆರೋಪಿಯಲ್ಲ. ಆದರೆ, ಅವರನ್ನು ಸಾಕ್ಷಿಯಾಗಿ ವಿಚಾರಣೆ ನಡೆಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.