ADVERTISEMENT

‘ತಾಯಿಗೆ ಹಣ, ಸಮಯ ನೀಡುವುದು ಪತ್ನಿ ವಿರುದ್ಧದ ಕೌಟುಂಬಿಕ ಹಿಂಸೆ ಅಲ್ಲ’

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 16:20 IST
Last Updated 14 ಫೆಬ್ರುವರಿ 2024, 16:20 IST
.
.   

ಮುಂಬೈ (ಪಿಟಿಐ): ವ್ಯಕ್ತಿಯು ತನ್ನ ತಾಯಿಗೆ ಸಮಯ ಮತ್ತು ಹಣ ನೀಡುವುದನ್ನು ಕೌಂಟುಂಬಿಕ ಹಿಂಸೆ ಎಂದು ಪರಿಗಣಿಸಲಾಗದು ಎಂದು ಇಲ್ಲಿನ ಸೆಷನ್ಸ್‌ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪತಿ ಮತ್ತು ಅತ್ತೆಯ ವಿರುದ್ಧದ ದೂರಿನ ವಿಚಾರವಾಗಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಈ ಮಾತು ಹೇಳಿತು.

ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಆಶೀಶ್‌ ಆಯಾಚಿತ್‌ ಅವರು, ಪ್ರತಿವಾದಿಗಳ ವಿರುದ್ಧದ ಆರೋಪಗಳು ಅಸ್ಪಷ್ಟ ಮತ್ತು ಸಂದಿಗ್ಧತೆಯಿಂದ ಕೂಡಿವೆ. ಕೌಟುಂಬಿಕ ಹಿಂಸೆಯ ಸ್ವರೂಪದಂತೆ ಇಲ್ಲ ಎಂದು ತಿಳಿಸಿದರು.

ADVERTISEMENT

ಪ್ರಕರಣ ಏನು?:

ಮಹಿಳೆ ರಾಜ್ಯದ ಸಚಿವಾಲಯದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿ ರಕ್ಷಣೆ ನೀಡಬೇಕು ಮತ್ತು ಹಣಕಾಸು ನೆರವು, ಪರಿಹಾರ ನೀಡಬೇಕೆಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

‘ಪತಿಯು ತಮ್ಮ ತಾಯಿಯ ಮಾನಸಿಕ ಅಸ್ವಸ್ಥತೆಯನ್ನು ಶಮನ ಮಾಡಲು ನನ್ನನ್ನು ವಿವಾಹವಾಗಿದ್ದಾರೆ ಮತ್ತು ತಾಯಿಯಿಂದಾಗಿ ಹಾದಿ ತಪ್ಪಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದರು. ‘ನಾನು ಉದ್ಯೋಗಕ್ಕೆ ಹೋಗುವುದನ್ನು  ಅತ್ತೆ ವಿರೋಧಿಸುತ್ತಾರೆ ಮತ್ತು ಕಿರುಕುಳ ನೀಡುತ್ತಾರೆ’ ಎಂದೂ ದೂರಿದ್ದರು.

‘ಪತಿ ಉದ್ಯೋಗ ನಿಮಿತ್ತ 1993ರ ಸೆಪ್ಟೆಂಬರ್‌ನಿಂದ 2004ರ ಡಿಸೆಂಬರ್‌ವರೆಗೆ ವಿದೇಶಕ್ಕೆ ತೆರಳಿದ್ದರು. ರಜೆಯ ಮೇಲೆ ತವರಿಗೆ ಬಂದಾಗಲೆಲ್ಲಾ ಅವರು ತಾಯಿಯನ್ನು ಭೇಟಿಯಾಗುತ್ತಿದ್ದರು ಮತ್ತು ಪ್ರತಿ ವರ್ಷ ₹10,000 ಕಳುಹಿಸುತ್ತಿದ್ದರು. ತಾಯಿಯ ಕಣ್ಣಿನ ಶಸ್ತ್ರಚಿಕಿತ್ಸೆಗೂ ಸಾಕಷ್ಟು ಖರ್ಚು ಮಾಡಿದ್ದಾರೆ’ ಎಂದು  ದೂರಿನಲ್ಲಿ ಹೇಳಿದ್ದರು.

 ವಾದ–ಪ್ರತಿವಾದ ಆಲಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಸೆಷನ್ಸ್‌ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.