ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಲ್ಲಿಸಿರುವ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ದೆಹಲಿ ನ್ಯಾಯಾಲಯ ಶನಿವಾರ ಪರಿಗಣನೆಗೆ ತೆಗೆದುಕೊಂಡಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಎಲ್ಲ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಪಡೆದ ಬಳಿಕ, ಪೊಲೀಸರು ಹೆಚ್ಚುವರಿ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಈ ಆರೋಪ ಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಂಡ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಅವರು, ಈ ಪ್ರಕರಣದಲ್ಲಿ ಆರು ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಾಧಾರಗಳು ಇವೆ ಎಂದು ಹೇಳಿದರು.
ನ್ಯಾಯಾಂಗ ಬಂಧನ ವಿಸ್ತರಣೆ
ಆರೋಪಿಗಳಾದ ಡಿ. ಮನೋರಂಜನ್, ಲಲಿತ್ ಝಾ, ಅಮೋಲ್ ಶಿಂದೆ, ಮಹೇಶ್ ಕುಮಾವತ್, ಸಾಗರ್ ಶರ್ಮಾ ಮತ್ತು ನೀಲಂ ಆಜಾದ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 9ರವರೆಗೆ ವಿಸ್ತರಿಸಿ ನ್ಯಾಯಾಧೀಶರು ಆದೇಶಿಸಿದರು. ಅಂದು ಪ್ರಕರಣದ ವಿಚಾರಣೆಯೂ ನಡೆಯಲಿದೆ.
ಈ ಆರು ಆರೋಪಿಗಳ ವಿರುದ್ಧ ಪೊಲೀಸರು ಜೂನ್ 7ರಂದು ಸುಮಾರು 1000 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು.
ಸಂಸತ್ ಮೇಲಿನ ದಾಳಿ ಪ್ರಕರಣದ ಸ್ಮರಣೆಯ ಸಂದರ್ಭದಲ್ಲಿ ಸಾಗರ್ ಶರ್ಮಾ ಮತ್ತು ಡಿ.ಮನೋರಂಜನ್ ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದರು. ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್ ಕ್ಯಾನ್’ ಹಾರಿಸಿ ದಾಂದಲೆ ಎಬ್ಬಿಸಿದ್ದರು. ಅದೇ ಸಮಯಕ್ಕೆ ಸಂಸತ್ ಭವನದ ಹೊರಗೆ ಅಮೋಲ್ ಶಿಂದೆ ಮತ್ತು ನೀಲಂ ಆಜಾದ್ ಬಣ್ಣದ ಹೊಗೆ ಹಾರಿಸಿ ಘೋಷಣೆ ಕೂಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.