ADVERTISEMENT

ಯುಪಿಎಸ್‌ಸಿ ಕ್ರಮದ ಬೆನ್ನಲ್ಲೇ ಪೂಜಾ ಖೇಡ್ಕರ್‌ಗೆ ಬಂಧನದ ಭೀತಿ

ಮಹಾರಾಷ್ಟ್ರ ಕೇಡರ್‌ನ 2022ನೇ ಬ್ಯಾಚ್‌ನ ವಿವಾದಿತ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಡಾ.ಪೂಜಾ ಖೇಡ್ಕರ್‌

ಪಿಟಿಐ
Published 31 ಜುಲೈ 2024, 12:51 IST
Last Updated 31 ಜುಲೈ 2024, 12:51 IST
<div class="paragraphs"><p>ಪೂಜಾ ಖೇಡ್ಕರ್‌</p></div>

ಪೂಜಾ ಖೇಡ್ಕರ್‌

   

ನವದೆಹಲಿ: ಮಹಾರಾಷ್ಟ್ರ ಕೇಡರ್‌ನ 2022ನೇ ಬ್ಯಾಚ್‌ನ ವಿವಾದಿತ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಡಾ.ಪೂಜಾ ಖೇಡ್ಕರ್‌ ಅವರು ಬಂಧನದ ಭೀತಿ ಎದುರಿಸುತ್ತಿದ್ದು, ಅವರು ದೆಹಲಿ ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಕುರಿತ ಆದೇಶ ನಾಳೆ (ಆಗಸ್ಟ್ 1ರಂದು) ಹೊರಬೀಳಲಿದೆ.

ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾದೀಶ ದೇವೇಂದ್ರ ಕುಮಾರ್ ಜನಗಾಲಾ ಅವರು ಈ ಕುರಿತು ವಿಚಾರಣೆಯನ್ನು ಇಂದು ಪೂರ್ಣಗೊಳಿಸಿ ಆದೇಶವನ್ನು ಕಾಯ್ದಿರಿಸಿದರು.

ADVERTISEMENT

ಜಾಮೀನು ಅರ್ಜಿಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿರುವ ಪ್ರಾಷಿಕ್ಯೂಷನ್, ಡಾ.ಪೂಜಾ ಖೇಡ್ಕರ್‌ ಒಂದು ಪ್ರಬಲ ವ್ಯವಸ್ಥೆಗೆ ವಂಚನೆ ಮಾಡಿದ್ದಾರೆ. ಹಾಗಾಗಿ ಅವರನ್ನು ಬಂಧಿಸಿ ವಿಚಾರಣೆ ನಡೆಸುವುದು ಸೂಕ್ತವಾಗಿದೆ ಎಂದು ವಾದಿಸಿದ್ದಾರೆ.

ಅರ್ಜಿದಾರರ ಹಿನ್ನೆಲೆ ಬಲಿಷ್ಠವಾಗಿದ್ದು ಅವರಿಗೆ ಜಾಮೀನು ನೀಡಿದರೆ ಈ ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಬಹುದು ಎಂದು ಅರುಹಿದ್ದಾರೆ.

ಪೂಜಾ ಆಯ್ಕೆ ಅನೂರ್ಜಿತ: ಯುಪಿಎಸ್‌ಸಿ ಕ್ರಮ

ಡಾ.ಪೂಜಾ ಖೇಡ್ಕರ್‌ ಅವರ ಆಯ್ಕೆಯನ್ನು ಕೇಂದ್ರ ಲೋಕಸೇವಾ ಆಯೋಗ ಇಂದು ಅನೂರ್ಜಿತಗೊಳಿಸಿದೆ.

ಅಲ್ಲದೇ ಪೂಜಾ ಅವರಿಗೆ ಆಯೋಗ ನಡೆಸುವ ಯಾವುದೇ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಇಲ್ಲ ಎಂದು ಹೇಳಿದೆ.

ಮಹಾರಾಷ್ಟ್ರದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪೂಜಾ ಅವರನ್ನು ಅಂಗವೈಕಲ್ಯ ಹಾಗೂ ಒಬಿಸಿ ಕೋಟಾ ದುರುಪಯೋಗದ ಆರೋಪದ ಮೇಲೆ ವರ್ಗಾವಣೆ ಮಾಡಲಾಗಿತ್ತು.

ಈ ಕುರಿತು ಪೂಜಾ ಖೇಡ್ಕರ್‌ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ ಪ್ರಕರಣ ದಾಖಲಿಸಿ ನಾಗರಿಕ ಸೇವಾ ಪರೀಕ್ಷೆ 2022ರ ನಿಯಮಗಳ ಅಡಿ ತನಿಖೆ ನಡೆಸಿತ್ತು. ತನಿಖೆಯಲ್ಲಿ ಅವರ ಮೇಲಿನ ಆರೋಪಗಳು ಸಾಬೀತಾಗಿರುವುದರಿಂದ ಅವರನ್ನು ಅನೂರ್ಜಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.

ಯುಪಿಎಸ್‌ಸಿಯ ಈ ಕ್ರಮದಿಂದ ಐಎಎಸ್ ಅಧಿಕಾರಿ ಪೂಜಾ ಇದೀಗ ಕೆಲಸ ಕಳೆದುಕೊಂಡು ಮುಖಭಂಗ ಅನುಭವಿಸಿದಂತಾಗಿದೆ.

'ಪೂಜಾ ಅವರು ದುಷ್ಕೃತ್ಯದ ಮೂಲಕ ತಮಗೆ ಅನುಮತಿಸಿದ್ದ ಮಿತಿಯನ್ನು ಮೀರಿ ಹಲವು ಪ್ರಯತ್ನಗಳನ್ನು ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಇವರ ನೇಮಕಾತಿಯನ್ನೇ ರದ್ದುಗೊಳಿಸುವಂತ ಗಂಭೀರ ಕ್ರಮ ಕೈಗೊಳ್ಳಲು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಆಯೋಗ ಜುಲೈ 19ರಂದು ತಿಳಿಸಿತ್ತು.

2023ನೇ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಖೇಡ್ಕರ್ ಅವರನ್ನು ವಾಶೀಂ ಜಿಲ್ಲೆಗೆ ಮಹಾರಾಷ್ಟ್ರ ಸರ್ಕಾರ ವರ್ಗಾವಣೆ ಮಾಡಿತ್ತು. ಅವರು ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿದ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ತಾವು ಭಾಗಶಃ ಅಂಗವೈಕಲ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಆಕ್ಷೇಪಣೆ ಸಲ್ಲಿಸಲು ಅವಕಾಶ ಕೊಟ್ಟರೂ ಅವರು ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಆಯೋಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.