ನವದೆಹಲಿ: ‘ಅಪ್ರಾಪ್ತರನ್ನೊಳಗೊಂಡ ಲೈಂಗಿಕ ದೌರ್ಜನ್ಯ ಪ್ರಕರಣದ ಎಫ್‌ಐಆರ್ ಕೇವಲ ಒಂದು ಕಾಗದ ಎಂದು ಪರಿಗಣಿಸದೇ, ಸಂತ್ರಸ್ತೆಯ ಮನಸ್ಸು ಮತ್ತು ಭವಿಷ್ಯದ ಮೇಲೆ ಅದು ಬೀರಬಹುದಾದ ಕೆಟ್ಟ ಪರಿಣಾಮಗಳನ್ನು ನ್ಯಾಯಾಲಯ ಅರಿಯುವುದು ಮುಖ್ಯ’ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ಕೆಲವೊಂದು ಕಟು ನುಡಿಗಳು ಮತ್ತು ನಿರ್ಣಯಗಳು ಸಂತ್ರಸ್ತರ ಮೇಲೆ ಮಾನಸಿಕ ಮತ್ತು ಭಾವನಾತ್ಮಕವಾಗಿ ಪರಿಣಾಮ ಬೀರಲಿದೆ. ಇಂಥ ಪ್ರಕರಣಗಳಲ್ಲಿ ಪ್ರತಿಯೊಂದಕ್ಕೂ ಸೂಕ್ಷ್ಮ ಸಾಕ್ಷ್ಯ ಒದಗಿಸುವುದು ಮಾನಸಿಕವಾಗಿ ಜರ್ಜರಿತರನ್ನಾಗಿಸುವ ಅಪಾಯವೂ ಇದೆ’ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ತನ್ನ ಆರೋಪವನ್ನು ಸಾಬೀತುಪಡಿಸುವ ಸಂದರ್ಭದಲ್ಲಿ ಸಾಕ್ಷ್ಯವಾಗಿ ಪರಿಗಣಿಸಿದ ಸಿಸಿಟಿವಿ ದೃಶ್ಯಾವಳಿ ಮತ್ತು ಕರೆಗಳ ದಾಖಲೆಗಳನ್ನು ಸಂರಕ್ಷಿಸುವ ಸಂತ್ರಸ್ತೆಯ ಕೋರಿಕೆಯನ್ನು ಕೆಳ ಹಂತದ ನ್ಯಾಯಾಲಯ ತಳ್ಳಿಹಾಕಿದ್ದರ ಕುರಿತು ಹೈಕೋರ್ಟ್ ಈ ಮೇಲಿನಂತೆ ಹೇಳಿದೆ.
‘ತನ್ನ ಬಾವ ಹಾಗೂ ಆತನ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯೊಬ್ಬರು ಅನುಭವಿಸಿದ ಮಾನಸಿಕ ಆಘಾತದಿಂದಾಗಿ ಕೆಲವೊಂದು ಮಾಹಿತಿಯನ್ನು ಆಕೆ ನೆನಪಿಟ್ಟುಕೊಂಡು ಪೊಲೀಸರಿಗೆ ವಿವರಿಸಲು ಸಾಧ್ಯವಾಗದಿರಬಹುದು. ಆದರೆ ನ್ಯಾಯಾಲಯಗಳು ಸಂತ್ರಸ್ತೆ ಕುರಿತು ಕಾಳಜಿ ವಹಿಸಬೇಕು ಮತ್ತು ಹೆಚ್ಚು ಸಂವೇದನೆಯಿಂದ ವರ್ತಿಸಬೇಕು’ ಎಂದು ನ್ಯಾ. ಸ್ವರ್ಣಕಾಂತಾ ಶರ್ಮಾ ಅವರಿದ್ದ ಪೀಠವು ತಿಳಿ ಹೇಳಿದೆ.
‘ಸದ್ಯ ಸಂತ್ರಸ್ತೆಯು ಮಾನವ ವರ್ತನೆ ಮತ್ತು ಪೂರಕ ವಿಜ್ಞಾನ ಸಂಸ್ಥೆಯ ಆರೈಕೆಯಲ್ಲಿದ್ದಾರೆ. ಅವರ ಮಾನಸಿಕ ಸ್ಥಿತಿ ಉತ್ತಮಗೊಂಡ ನಂತರ ವಿಚಾರಣೆ ವೇಳೆ ಹೇಳಿದ ದ್ವಂದ್ವ ಹೇಳಿಕೆ ಕುರಿತು ಸ್ಪಷ್ಟನೆ ಪಡೆಯಬೇಕು. ಈ ಕುರಿತಂತೆ ತನಿಖಾಧಿಕಾರಿಗೆ ನಿರ್ದೇಶನ ನೀಡಿ ನಿರ್ದಿಷ್ಟ ದಿನಾಂಕದ ಸಿಸಿಟಿವಿ ಮತ್ತು ಸಿಡಿಆರ್‌ಗಳನ್ನು ಸಂಗ್ರಹಿಸಬೇಕು’ ಎಂದು ನ್ಯಾಯಾಲಯ ಹೇಳಿದೆ.
‘ಆದರೆ ವಿಷಾದದ ಸಂಗತಿ ಎಂದರೆ, ಈ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವೇ ಸಿಸಿಟಿವಿ ದೃಶ್ಯ ಮತ್ತು ಕರೆ ದಾಖಲೆಯನ್ನು ಸಂರಕ್ಷಿಸುವ ಕೋರಿಕೆಯನ್ನು ತಳ್ಳಿ ಹಾಕಿರುವುದು’ ಎಂದು ಹೈಕೋರ್ಟ್ ಪೀಠ ಇತ್ತೀಚೆಗೆ ಹೇಳಿತ್ತು.
‘ನ್ಯಾಯಾಲಯಗಳು ಭರವಸೆ ಮೂಡಿಸುವ ಮತ್ತು ನ್ಯಾಯದಾನ ಕೇಂದ್ರಗಳು. ಆದರೆ ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ಮಾನಸಿಕ ಒತ್ತಡವನ್ನು ಸೃಷ್ಟಿಸುವಂತಹ ಪರಿಸರವನ್ನು ನಿರ್ಮಾಣ ಮಾಡಬಾರದು. ಅಂಥ ವ್ಯಕ್ತಿಗಳು ಮಾನಸಿಕವಾಗಿ ಸಿದ್ಧರಾಗುವ ಪರಿಸರವನ್ನು ಅವರಿಗೆ ಸೃಷ್ಟಿಸಬೇಕು’ ಎಂದು ಪೀಠ ಹೇಳಿದೆ.
‘ನ್ಯಾಯಾಲಯಗಳೂ ತಮ್ಮನ್ನು ತಾವು ಅರಿಯುವುದು ಮುಖ್ಯ. ತಾವು ಬದ್ಧರಾಗಿರುವ ಮತ್ತು ಪ್ರಮಾಣ ಸ್ವೀಕರಿಸಿರುವ ವೃತ್ತಿಗೆ ನ್ಯಾಯ ಒದಗಿಸಬೇಕು. ನ್ಯಾಯಾಲಯದ ಕೆಲಸ ಕೇವಲ ಕಾನೂನು ವ್ಯಾಖ್ಯಾನಿಸುವುದು ಮಾತ್ರವಲ್ಲ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನೂ ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಬೇಕಿದೆ’ ಎಂದು ನ್ಯಾಯಮೂರ್ತಿ ಶರ್ಮಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.