ADVERTISEMENT

ಕೋವಿಡ್‌ನಿಂದ ಪತಿ ಕಳೆದುಕೊಂಡ ಮಹಿಳೆಯರಿಗೆ ತಲಾ ₹ 2.5 ಲಕ್ಷ: ಅಸ್ಸಾಂ ಸರ್ಕಾರ

ಪಿಟಿಐ
Published 27 ಜೂನ್ 2021, 15:37 IST
Last Updated 27 ಜೂನ್ 2021, 15:37 IST
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ    

ಗುವಾಹಟಿ: ಕುಟುಂಬದ ಆದಾಯ ₹ 5 ಲಕ್ಷಕ್ಕಿಂತ ಕಡಿಮೆಯಿದ್ದರೆ ಕೋವಿಡ್‌-19ನಿಂದ ಪತಿಯನ್ನು ಕಳೆದುಕೊಂಡ ಎಲ್ಲಾ ವಿಧವೆಯರಿಗೆ ತಲಾ ₹ 2.5 ಲಕ್ಷ ಪರಿಹಾರ ನೀಡುವುದಾಗಿ ಅಸ್ಸಾಂ ಸರ್ಕಾರ ಭಾನುವಾರ ಪ್ರಕಟಿಸಿದೆ.

'ಒರುನೊಡೊಯ್' ಮತ್ತು 'ವಿಧವಾ ಮಾಸಾಶನ' ಯೋಜನೆಗಳ ಫಲಾನುಭವಿಗಳು ಕೂಡ 'ಮುಖ್ಯಮಂತ್ರಿಯವರ ಕೋವಿಡ್-19 ವಿಧವೆಯರ ಬೆಂಬಲ ಯೋಜನೆ' ಅಡಿಯಲ್ಲಿ ಒಂದು ಬಾರಿಯ ಆರ್ಥಿಕ ಸಹಾಯಕ್ಕೆ ಅರ್ಹರಾಗಿರುತ್ತಾರೆ.

'ಕೋವಿಡ್-19 ಕಾರಣದಿಂದಾಗಿ ಅನೇಕ ಅಮೂಲ್ಯ ಜೀವಗಳು ಮೃತಪಡುತ್ತಿವೆ, ಇದರಿಂದಾಗಿ ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೋವಿಡ್‌ನಿಂದ ಪತಿಯನ್ನು ಕಳೆದುಕೊಂಡ ಮಹಿಳೆಯರಿಗೆ ಸ್ವಲ್ಪ ಪರಿಹಾರವನ್ನು ನೀಡುವ ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ, ಅರ್ಹರಿಗೆ ₹ 2.5 ಲಕ್ಷ ನೀಡಲಾಗುತ್ತದೆ' ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ADVERTISEMENT

ಯೋಜನೆಯ ಪ್ರಕಾರ, ಫಲಾನುಭವಿಯ ಪತಿ ಸಾವಿನ ಸಮಯದಲ್ಲಿ ಕೋವಿಡ್ ಪಾಸಿಟಿವ್ ಆಗಿರಬೇಕು ಮತ್ತು ಅದನ್ನು ರಾಜ್ಯ ಮಟ್ಟದ ಕೋವಿಡ್ ಡೆತ್ ಆಡಿಟ್ ಮಂಡಳಿಯು ಪ್ರಮಾಣೀಕರಿಸಬೇಕು.

ಫಲಾನುಭವಿಯು ಕಡ್ಡಾಯವಾಗಿ ಕಡಿಮೆ ಆದಾಯದ ಕುಟುಂಬಕ್ಕೆ ಸೇರಿದವರಾಗಿದ್ದು, ವಾರ್ಷಿಕ ಆದಾಯ ₹ 5 ಲಕ್ಷಕ್ಕಿಂತ ಕಡಿಮೆಯಿರಬೇಕು. ಆದಾಗ್ಯೂ, ವಿಧವೆಯಾಗಿರುವ ಸರ್ಕಾರಿ ನೌಕರರ ಪತ್ನಿಯರು ಕುಟುಂಬ ಪಿಂಚಣಿ ಪಡೆಯುವುದರಿಂದ ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಅದು ಹೇಳಿದೆ.

'ಜಿಲ್ಲಾಧಿಕಾರಿಗಳು ಕೋವಿಡ್ ಸಂತ್ರಸ್ತರ ಎನ್‌ಎಚ್‌ಎಂ ಡೇಟಾ ಬೇಸ್‌ನಿಂದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ಈ ವೇಳೆ ಅರ್ಹತಾ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಪಟ್ಟಿಯನ್ನು ಪರಿಶೀಲಿಸಲಾಗುತ್ತದೆ. ಪರಿಶೀಲನೆ ನಂತರ, ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಜಮೆ ಮಾಡಲಾಗುವುದು' ಎಂದು ಯೋಜನೆಯ ನಿಯಮಾವಳಿಯಲ್ಲಿ ಹೇಳಿದೆ.

ಅಂತಿಮ ಪಟ್ಟಿಯಲ್ಲಿಲ್ಲದ ವ್ಯಕ್ತಿಯು ಸೌಲಭ್ಯವನ್ನು ಪಡೆಯಲು ಅರ್ಹವಾಗಿದ್ದರೆ, ಪೂರಕ ದಾಖಲೆಗಳನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಸಲ್ಲಿಸಬಹುದು.

ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಬುಲೆಟಿನ್ ಪ್ರಕಾರ, ಕೋವಿಡ್-19ನಿಂದಾಗಿ ಅಸ್ಸಾಂನಲ್ಲಿ ಒಟ್ಟು 4,403 ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.