ADVERTISEMENT

ಕೋವಿಡ್: ತೊಂದರೆಗೀಡಾಗಿರುವ ರಾಜ್ಯಗಳಿಗೆ ಮುಂದಿನ ವಾರದೊಳಗೆ ಇನ್ನಷ್ಟು ಲಸಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 1:30 IST
Last Updated 18 ಏಪ್ರಿಲ್ 2021, 1:30 IST
ಹರ್ಷವರ್ಧನ್ (ಪಿಟಿಐ ಚಿತ್ರ)
ಹರ್ಷವರ್ಧನ್ (ಪಿಟಿಐ ಚಿತ್ರ)   

ನವದೆಹಲಿ: ಕೋವಿಡ್ ಎರಡನೇ ಅಲೆಯಿಂದ ಹೆಚ್ಚು ತೊಂದರೆಗೀಡಾಗಿರುವ ರಾಜ್ಯಗಳಿಗೆ ಮುಂದಿನ ವಾರದ ಒಳಗಾಗಿ ಸುಮಾರು 1.17 ಕೋಟಿ ಡೋಸ್‌ ಲಸಿಕೆ ಪೂರೈಸಲಾಗುವುದು ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಜತೆಗೆ, 6,300ಕ್ಕೂ ಹೆಚ್ಚು ವೆಂಟಿಲೇಟರ್‌ಗಳನ್ನೂ ಒದಗಿಸಲಾಗುವುದು ಎಂದೂ ಹೇಳಿದ್ದಾರೆ.

ರಾಜ್ಯಗಳ ಸಚಿವರ ಜತೆ ಪರಾಮರ್ಶೆ ಸಭೆ ನಡೆಸಿದ ಅವರು, ಈವರೆಗೆ ಕೇಂದ್ರ ಸರ್ಕಾರವು 14.15 ಕೋಟಿ ಡೋಸ್ ಲಸಿಕೆ ಕಳುಹಿಸಿಕೊಟ್ಟಿದೆ. ಅದರಲ್ಲಿ 12.57 ಕೋಟಿ ಡೋಸ್ ಲಸಿಕೆ ಬಳಸಲಾಗಿದೆ (ವ್ಯರ್ಥವಾಗಿರುವುದೂ ಸೇರಿ) ಎಂದು ತಿಳಿಸಿದ್ದಾರೆ.

1.50 ಕೋಟಿ ಡೋಸ್ ಲಸಿಕೆಗಳು ರಾಜ್ಯ ಸರ್ಕಾರಗಳ ಬಳಿ ಲಭ್ಯವಿವೆ. ಇನ್ನೂ 1.17 ಕೋಟಿ ಡೋಸ್ ಲಸಿಕೆಗಳನ್ನು ಮುಂದಿನ ವಾರದ ಒಳಗೆ ಪೂರೈಸಲಾಗುವುದು. ಪ್ರತಿ ಸಣ್ಣ ರಾಜ್ಯಗಳಿಗೂ ಅವುಗಳ ಪಾಲನ್ನು 7 ದಿನಗಳಿಗೆ ಒಂದು ಬಾರಿಯಂತೆ ಕಳುಹಿಸಿಕೊಡಲಾಗುತ್ತದೆ. ದೊಡ್ಡ ರಾಜ್ಯಗಳಿಗೆ 4 ದಿನಗಳಿಗೊಮ್ಮೆ ಕಳುಹಿಸಿಕೊಡಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಕೋವಿಡ್ ಸೋಂಕು ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಮಧ್ಯ ಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ಹರ್ಷವರ್ಧನ್ ಪರಾಮರ್ಶೆ ನಡೆಸಿದ್ದಾರೆ.

ಎಲ್ಲ ರಾಜ್ಯಗಳು ಆಕ್ಸಿಜನ್ ಮತ್ತು ರೆಮ್‌ಡಿಸಿವಿರ್ ಕೊರತೆ ವಿಷಯ ಪ್ರಸ್ತಾಪಿಸಿದ್ದವು. ಇವೆರಡರ ಉತ್ತಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ಸಭೆಯಲ್ಲಿ ಅವರಿಗೆ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ಮಹಾರಾಷ್ಟ್ರಕ್ಕೆ 1,121, ಉತ್ತರ ಪ್ರದೇಶಕ್ಕೆ 1,700, ಜಾರ್ಖಂಡ್‌ಗೆ 1,500, ಗುಜರಾತ್‌ಗೆ 1,600, ಮಧ್ಯ ಪ್ರದೇಶಕ್ಕೆ 152 ಹಾಗೂ ಛತ್ತೀಸ್‌ಗಡಕ್ಕೆ 230 ವೆಂಟಿಲೇಟರ್‌ಗಳನ್ನು ಪೂರೈಸುವುದಾಗಿಯೂ ಹರ್ಷವರ್ಧನ್ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.