ನವದೆಹಲಿ: ‘ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿ ಫೇಸ್‌ಬುಕ್‌ನಲ್ಲಿ #ResignModi ಹ್ಯಾಷ್‌ಟ್ಯಾಗ್‌ನಲ್ಲಿ ಮಾಡಿದ್ದ ಪೋಸ್ಟ್‌ಗಳನ್ನು, ಬುಧವಾರ ರಾತ್ರಿ ಫೇಸ್‌ಬುಕ್ ತೆಗೆದುಹಾಕಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಈ ಪೋಸ್ಟ್‌ಗಳು ಲಭ್ಯವಾಗುವಂತೆ (ಅನ್‌ಬ್ಲಾಕ್)ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯದಿಂದಲೇ ದೇಶದಲ್ಲಿ ಕೋವಿಡ್ ತೀವ್ರವಾಗಿ ಹರಡುತ್ತಿದೆ. ಈ ದುರಂತದ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಹೊರಬೇಕು. ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ. ಫೇಸ್‌ಬುಕ್‌ನಲ್ಲಿ ಸಾವಿರಾರು ಮಂದಿ #ResignModi ಹ್ಯಾಷ್‌ಟ್ಯಾಗ್‌ನಲ್ಲಿ ಮೋದಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
#ResignModi ಹ್ಯಾಷ್‌ಟ್ಯಾಗ್‌ನಲ್ಲಿ ಮಾಡಲಾಗಿದ್ದ ಪೋಸ್ಟ್‌ಗಳನ್ನು ಬುಧವಾರ ತಡರಾತ್ರಿ ಫೇಸ್‌ಬುಕ್ ಸ್ಥಗಿತ (ಬ್ಲಾಕ್) ಮಾಡಿತ್ತು. ಈ ಹ್ಯಾಷ್‌ಟ್ಯಾಗ್‌ನಲ್ಲಿ ಮಾಡಿದ್ದ ಪೋಸ್ಟ್‌ಗಳು ಯಾರಿಗೂ ಕಾಣಿಸುತ್ತಿರಲಿಲ್ಲ. ಪೋಸ್ಟ್ ಮಾಡಿದ್ದವರಲ್ಲಿ ಹಲವರ ಖಾತೆಗಳನ್ನೂ ತಾತ್ಕಾಲಿಕ ಅವಧಿಯವರೆಗೆ ಬ್ಲಾಕ್ ಮಾಡಲಾಗಿತ್ತು. ಫೇಸ್‌ಬುಕ್‌ನ ಈ ಕ್ರಮವನ್ನು ಖಂಡಿಸಿ ಮತ್ತೆ ಸಾವಿರಾರು ಮಂದಿ ಪೋಸ್ಟ್ ಮಾಡಿದರು. ತಮ್ಮ ಪೋಸ್ಟ್‌ಗಳು ಬ್ಲಾಕ್ ಆಗಿರುವ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಆರಂಭಿಸಿದರು.
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಫೇಸ್‌ಬುಕ್ ಈ ಕ್ರಮ ತೆಗೆದುಕೊಂಡಿದೆ ಎಂದು ಹಲವರು ಆರೋಪಿಸಿದ್ದಾರೆ. ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಪ್ರಕಟವಾಗುವ ಪೋಸ್ಟ್‌ಗಳನ್ನು ಸರ್ಕಾರದ ಆದೇಶದ ಮೇರೆಗೆ ತೆಗೆದುಹಾಕಲು ಈಗ ಅವಕಾಶವಿದೆ. ಅದನ್ನು ಮೋದಿ ಅವರ ನೇತೃತ್ವದ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ತನ್ನ ಕ್ರಮಕ್ಕೆ ಭಾರಿ ಆಕ್ಷೇಪ ವ್ಯಕ್ತವಾದ ಕಾರಣ, ಫೇಸ್‌ಬುಕ್ ಗುರುವಾರ ಬೆಳಿಗ್ಗೆ ವೇಳೆಗೆ ಆ ಪೋಸ್ಟ್‌ಗಳನ್ನು ಅನ್‌ಬ್ಲಾಕ್ ಮಾಡಿತು. ‘ಸರ್ಕಾರದ ಆದೇಶದ ಮೇರೆಗೆ ನಾವು ಈ ಕ್ರಮ ತೆಗೆದುಕೊಂಡಿಲ್ಲ. ತಾಂತ್ರಿಕ ಮತ್ತು ವಿಶ್ಲೇಷಣೆಯಲ್ಲಿ ಆದ ತಪ್ಪಿನಿಂದ ಪೋಸ್ಟ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿತ್ತು. ಈಗ ಅವನ್ನು ಅನ್‌ಬ್ಲಾಕ್ ಮಾಡಲಾಗಿದೆ’ ಎಂದು ಫೇಸ್‌ಬುಕ್ ಹೇಳಿಕೆ ನೀಡಿದೆ.
ತಪ್ಪು ಮಾಹಿತಿ ಅಥವಾ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದು ಪೋಸ್ಟ್‌ಗಳನ್ನು ಬಳಕೆದಾರರು ವರದಿ ಮಾಡಲು ಫೇಸ್‌ಬುಕ್‌ನಲ್ಲಿ ಅವಕಾಶವಿದೆ. ಹೀಗೆ ವರದಿ ಮಾಡಲಾದ ಪೋಸ್ಟ್‌ಗಳನ್ನು ಫೇಸ್‌ಬುಕ್‌ನ ಸ್ವಯಂಚಾಲಿತ ವ್ವವಸ್ಥೆ ಬ್ಲಾಕ್ ಮಾಡುತ್ತದೆ. ಕೆಲವು ಸಂದರ್ಭದಲ್ಲಿ ವಿಶ್ಲೇಷಣಾ ತಂಡವು ಈ ಕ್ರಮ ತೆಗೆದುಕೊಳ್ಲುತ್ತದೆ. ಆದರೆ ಈ ಬಾರಿ ಸ್ವಯಂಚಾಲಿತವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆಯೇ ಅಥವಾ ವಿಶ್ಲೇಷಣಾ ತಂಡವು ಈ ಕ್ರಮ ತೆಗೆದುಕೊಂಡಿದೆಯೇ ಎಂಬುದನ್ನು ಫೇಸ್‌ಬುಕ್ ಸ್ಪಷ್ಟಪಡಿಸಿಲ್ಲ.
ಟ್ವಿಟರ್‌ನಲ್ಲಿಯೂ ಅಭಿಯಾನ
ಈ ಮೊದಲು ಟ್ವಿಟರ್‌ನಲ್ಲಿ #resignpm ಹ್ಯಾಷ್‌ಟ್ಯಾಗ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಒತ್ತಾಯಿಸಲಾಗಿತ್ತು. ಫೇಸ್‌ಬುಕ್ ಪೋಸ್ಟ್‌ಗಳನ್ನು ಬ್ಲಾಕ್ ಮಾಡಿದ ನಂತರ ಟ್ವಿಟರ್‌ನಲ್ಲಿಯೂ #ResignModi ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಲಾಗುತ್ತಿದೆ. ಟ್ವಿಟರ್‌ನಲ್ಲಿ ಗುರುವಾರ ಮಧ್ಯಾಹ್ನದ ನಂತರ #ResignModi ಹ್ಯಾಷ್‌ಟ್ಯಾಗ್‌ನಲ್ಲಿ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ. ಗುರುವಾರ ಸಂಜೆ 7ರ ವೇಳೆಗೆ 2.8 ಲಕ್ಷಕ್ಕೂ ಹೆಚ್ಚು ಬಾರಿ ಟ್ವೀಟ್ ಮಾಡಲಾಗಿದೆ. ಈ ಹ್ಯಾಷ್ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಕೂಡ ಆಗಿತ್ತು.
ಫೇಸ್‌ಬುಕ್‌ನಲ್ಲಿಯೂ ಇದೇ ಹ್ಯಾಷ್‌ಟ್ಯಾಗ್‌ನಲ್ಲಿ ಮತ್ತೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.