ಅಹಮದಾಬಾದ್: ‘ಕೊರೊನಾ ವೈರಸ್ ಹೋಗಿಲ್ಲ, ಅದು ತನ್ನ ರೂಪ ಬದಲಾಯಿಸುತ್ತಾ ಮತ್ತೆ ಮರುಕಳಿಸುತ್ತಿದೆ. ಹಾಗಾಗಿ, ಜನರು ಸಾಂಕ್ರಾಮಿಕ ರೋಗದ ವಿರುದ್ಧದ ತಮ್ಮ ಹೋರಾಟವನ್ನು ಕೈಬಿಡದೇ ಮುಂದುವರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಕೋವಿಡ್ ಎನ್ನುವ ‘ಬಹುರೂಪಿ’ (ಪದೇಪದೇ ರೂಪ ಬದಲಾಯಿಸುವುದು) ಯಾವಾಗ ತನ್ನ ರೂಪ ಬದಲಿಸಿ, ಮತ್ತೆ ಮರುಕಳಿಸುವುದೋ ಎಂಬುದು ಯಾರಿಗೂ ತಿಳಿಯದು’ ಎಂದ ಮೋದಿ, ‘ಸಾರ್ವಜನಿಕರ ಬೆಂಬಲದಿಂದಾಗಿ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ಸುಮಾರು 185 ಕೋಟಿ ಡೋಸ್ ಲಸಿಕೆಗಳನ್ನು ನೀಡುವುದು ಸಾಧ್ಯವಾಯಿತು’ ಎಂದು ತಿಳಿಸಿದ್ದಾರೆ.
ಗುಜರಾತ್‌ನ ಜುನಾಗಢ್ ಜಿಲ್ಲೆಯ ವಂಥಲಿಯಲ್ಲಿ ‘ಮಾ ಉಮಿಯಾ ಧಾಮ್‌ನ ಮಹಾಪಾಟೋತ್ಸವ ಕಾರ್ಯಕ್ರಮವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಮೋದಿ, ರಾಸಾಯನಿಕ ಗೊಬ್ಬರಗಳ ಹಾವಳಿಯಿಂದ ಭೂಮಿ ತಾಯಿಯನ್ನು ರಕ್ಷಿಸುವ ಉದ್ದೇಶದಿಂದ ನೈಸರ್ಗಿಕ ಕೃಷಿಯತ್ತ ಮುಖ ಮಾಡುವಂತೆ ಮಾ ಉಮಿಯಾ ಭಕ್ತರನ್ನು ಒತ್ತಾಯಿಸಿದರು.
‘ಭಾರತದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಲು ಆಯೋಜಿಸಲಾಗುತ್ತಿರುವ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಪ್ರತಿಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು (ಕೆರೆಗಳನ್ನು) ರಚಿಸುವ ಪ್ರತಿಜ್ಞೆಯನ್ನು ಕೈಗೊಳ್ಳೋಣ. ಪ್ರತಿವರ್ಷ ಮಳೆಗಾಲದ ಮೊದಲು ಕೆರೆಗಳ ಹೂಳುಗಳನ್ನು ಎತ್ತಿ, ನೀರಿನ ನಾಲೆಗಳನ್ನು ಸ್ವಚ್ಛಗೊಳಿಸುವ ಮೂಲಕ ಜಲಸಂರಕ್ಷಣೆಯ ಕಾರ್ಯವನ್ನು ಕೈಗೊಳ್ಳಬೇಕು’ ಎಂದೂ ಅವರು ಸಲಹೆ ನೀಡಿದರು.
‘ಮಾ ಉಮಿಯಾ ಅವರ ಭಕ್ತರು ಗ್ರಾಮೀಣ ಮಟ್ಟದಲ್ಲಿ ಅಪೌಷ್ಟಿಕ ಮಕ್ಕಳು ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ತಾಯಂದಿರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಯೋಜನೆಗಳನ್ನು ಕೈಗೆತ್ತಿಗೊಳ್ಳಬೇಕು. ದೇವಸ್ಥಾನದ ನಿರ್ವಹಣೆ ಮಾಡುವ ‘ಮಾ ಉಮಿಯಾ ಟ್ರಸ್ಟ್’, ಗ್ರಾಮಮಟ್ಟದಲ್ಲಿ ಮಕ್ಕಳ ಆರೋಗ್ಯ ವೃದ್ಧಿಸುವ ಸ್ಪರ್ಧೆಗಳನ್ನು ಆಯೋಜಿಸಬೇಕು’ ಎಂದರು.
ಸಬಲ ರೈತರಿಂದ ಸಮೃದ್ಧ ನವಭಾರತ: ಮೋದಿ
ನವದೆಹಲಿ: ‘ರೈತರು ಸಬಲರಾದಷ್ಟು ನವಭಾರತವು ಸಮೃದ್ಧಿಯಿಂದ ಕೂಡಿರುತ್ತದೆ’ ಎಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಪಿ.ಎಂ ಕಿಸಾನ್ ಸಮ್ಮಾನ್ ನಿಧಿ ಮತ್ತು ಇತರ ಕೃಷಿ ಸಂಬಂಧಿತ ಯೋಜನೆಗಳು ರೈತರಿಗೆ ಹೊಸ ಶಕ್ತಿ ನೀಡಿವೆ. ದೇಶದ 11.3 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ₹ 1.82 ಲಕ್ಷ ಕೋಟಿಯನ್ನು ನೇರವಾಗಿ ವರ್ಗಾಯಿಸಲಾಗಿದೆ’ ಎಂದು ಪ್ರಧಾನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
‘ರೈತ ಸಹೋದರ, ಸಹೋದರಿಯರ ಬಗ್ಗೆ ನಮ್ಮ ದೇಶವು ಹೆಮ್ಮೆ ಪಡುತ್ತದೆ. ಅವರು ಬಲಶಾಲಿಯಾದಷ್ಟೂ ನವಭಾರತವು ಸಮೃದ್ಧವಾಗಲಿದೆ’ ಎಂದೂ ಮೋದಿ ಹಿಂದಿಯಲ್ಲಿ ಮಾಡಿರುವ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.