ADVERTISEMENT

Covid-19 India Update: ದೇಶದಲ್ಲಿ ಇದೇ ಮೊದಲ ಬಾರಿಗೆ ಲಕ್ಷ ಕೋವಿಡ್ ಪ್ರಕರಣ

ಏಜೆನ್ಸೀಸ್
Published 5 ಏಪ್ರಿಲ್ 2021, 4:48 IST
Last Updated 5 ಏಪ್ರಿಲ್ 2021, 4:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್–19 ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ದೇಶದಾದ್ಯಂತ ಸೋಮವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ 1,03,558 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 478 ಸೋಂಕಿತರು ಅಸುನೀಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

2020ರ ಸೆಪ್ಟೆಂಬರ್ 17ರಂದು ಒಂದೇ ದಿನ 98,795 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಆ ಬಳಿಕ ಇದು ದಿನವೊಂದರಲ್ಲಿ ದಾಖಲಾದ ಗರಿಷ್ಠ ಪ್ರಕರಣಗಳಾಗಿವೆ. ಒಂದೇ ದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿರುವುದೂ ಇದೇ ಮೊದಲಾಗಿದೆ. ಈ ವಿಚಾರದಲ್ಲಿ ಭಾರತವೀಗ ಅಮೆರಿಕದ ನಂತರದ ಸ್ಥಾನ ಪಡೆದುಕೊಂಡಿದೆ.

ದೇಶದ ಒಟ್ಟು ಸೋಂಕಿತರ ಸಂಖ್ಯೆ ಈಗ 1.25 ಕೋಟಿ ದಾಟಿದ್ದು, ಈವರೆಗೆ 1,65,101 ಸಾವು ಸಂಭವಿಸಿದೆ. 1.16 ಕೋಟಿಗೂ ಹೆಚ್ಚು ಸೋಂಕಿತರು ಚೇತರಿಸಿಕೊಂಡಿದ್ದಾರೆ.

ದೇಶದಲ್ಲೀಗ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 7,41,830ಕ್ಕೆ ಏರಿಕೆಯಾಗಿದೆ. ಇದು ಒ‌ಟ್ಟು ಪ್ರಕರಣಗಳ ಶೇ 5.54ರಷ್ಟಾಗಿದೆ. ಗುಣಮುಖರಾಗುತ್ತಿರುವವರ ಪ್ರಮಾಣವೂ ಶೇ 93.14ಕ್ಕೆ ಕುಸಿದಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಸೋಂಕು ಹರಡುವಿಕೆ ತಡೆಯುವ ಸಲುವಾಗಿ ಅಲ್ಲಿ ವಾರಾಂತ್ಯ ಲಾಕ್‌ಡೌನ್, ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಕೋವಿಡ್‌ ಸ್ಥಿತಿ ಪರಾಮರ್ಶೆ ನಡೆಸಿದ್ದು, ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಮರಣ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ರಾಜ್ಯಗಳಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.