ADVERTISEMENT

ಭಾರತ | 548 ವೈದ್ಯಕೀಯ ಸಿಬ್ಬಂದಿಗೆ ತಗುಲಿದೆ ಕೊರೊನಾ ವೈರಸ್

ಪಿಟಿಐ
Published 6 ಮೇ 2020, 13:05 IST
Last Updated 6 ಮೇ 2020, 13:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ 548 ವೈದ್ಯರು, ನರ್ಸ್‌ಗಳು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿರುವುದಾಗಿ ಕೇಂದ್ರದ ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

ಸೋಂಕು ದೃಢಪಟ್ಟ ವೈದ್ಯಕೀಯ ಸಿಬ್ಬಂದಿಯ ಅಂಕಿ ಅಂಶದಲ್ಲಿ ವಾರ್ಡ್ ಬಾಯ್‌ಗಳು, ಕ್ಷೇತ್ರಕಾರ್ಯ ಮಾಡುವವರು, ಸ್ವಚ್ಛತಾಸಿಬ್ಬಂದಿಗಳು, ಅಟೆಂಡೆರ್‌, ಜವಾನರು, ಲಾಂಡ್ರಿ ಹಾಗೂ ಅಡುಗೆಯವರು ಒಳಗೊಂಡಿಲ್ಲಎಂದು ಮೂಲಗಳು ತಿಳಿಸಿವೆ.

ಕೋವಿಡ್‌–19 ದೃಢಪಟ್ಟಿರುವ ವೈದ್ಯರು, ನರ್ಸ್‌ಗಳು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹೇಗೆ ಹರಡಿದೆ ಎಂಬುದನ್ನು ಪತ್ತೆ ಹಚ್ಚಲಾಗಲಿಲ್ಲ. ಸೋಂಕಿತ ವೈದ್ಯಕೀಯ ಸಿಬ್ಬಂದಿ ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತಪ್ರದೇಶಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು.

ADVERTISEMENT

ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡಿರುವ ಸಂಬಂಧ ಯಾವುದೇ ರೀತಿಯ ತನಿಖೆ ನಡೆಸಲಾಗಿಲ್ಲ. ಆದ್ದರಿಂದ ಕೆಲಸದ ಸ್ಥಳದಲ್ಲಿ ಎಷ್ಟು ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದರೆ ಹಾಗೂ ಎಷ್ಟು ಜನರಿಗೆ ಸಮುದಾಯದಿಂದ ಸೋಂಕು ಹರಡಿದೆ ಎಂಬುದರ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಕೋವಿಡ್‌–19 ದೃಢಪಟ್ಟ ಕೆಲವೈದ್ಯರು ಸಾವನ್ನಪ್ಪಿದ್ದಾರೆ. ತಕ್ಷಣಕ್ಕೆ ಎಷ್ಟು ಜನ ಮೃತಪಟ್ಟಿದ್ದಾರೆಎಂಬುದು ತಿಳಿದು ಬಂದಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 69 ವೈದ್ಯರಿಗೆ ಸೋಂಕು ಹರಡಿರುವುದು ತಿಳಿದು ಬಂದಿದೆ. 274 ನರ್ಸ್‌ಗಳು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡಿದೆ. ದೆಹಲಿಯ ಏಮ್ಸ್ ಸೇರಿದಂತೆ ದೇಶದ 30 ಕ್ಕೂ ಹೆಚ್ಚು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ ವೈದ್ಯರು ಮತ್ತು ವೈದ್ಯಕೀಯ ಪ್ರಾಧ್ಯಾಪಕರಿಗೂ ಕೊರೊನಾ ವೈರಸ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ.

ದೇಶದಲ್ಲಿ ಇಲ್ಲಿಯವರೆಗೂ ಕೊರೊನಾ ವೈರಸ್‌ಗೆ 1694 ಜನ ಬಲಿಯಾಗಿದ್ದು, 49,391 ಜನರಲ್ಲಿ ಸೋಂಕು ದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.