ನವದೆಹಲಿ: ಕೋವಿಡ್ -19 ಹರಡುವಿಕೆ ನಿಯಂತ್ರಿಸುವಲ್ಲಿ ಮಾಸ್ಕ್‌ನ ಅಗತ್ಯದ ಕುರಿತು ಹೆಚ್ಚಿನ ಜಾಗೃತಿ ಇದ್ದಾಗ್ಯೂ, ದೇಶದ ಕೇವಲ ಶೇ. 44 ಮಂದಿ ಮಾತ್ರ ಮಾಸ್ಕ್ ಧರಿಸುತ್ತಿರುವ ಆಘಾತಕಾರಿ ವಿಚಾರವು ದೇಶದ 18 ನಗರಗಳನ್ನು ಒಳಗೊಂಡ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ದೇಶದ ಅರ್ಧಕ್ಕಿಂತ ಕಡಿಮೆ ಜನರು ಮಾಸ್ಕ್ ಅನ್ನು ಸೂಕ್ತ ರೀತಿಯಲ್ಲಿ, ಎಲ್ಲ ಸಂದರ್ಭಗಳಲ್ಲಿ ಧರಿಸುತ್ತಿದ್ದಾರೆ ಎಂಬುದು ಗೊತ್ತಾಗಿದೆ.
‘ಏಕ್‌ದೇಶ್’ ಎಂಬಸಂಸ್ಥೆಯು ತನ್ನ ‘ಅಪ್ನಾ ಮಾಸ್ಕ್’ ಉಪಕ್ರಮದ ಭಾಗವಾಗಿ ಭಾರತದ 18 ನಗರಗಳನ್ನು ಒಳಗೊಂಡಂತೆ ಸಮೀಕ್ಷೆ ನಡೆಸಿದೆ. ಮಾಸ್ಕ್ ಧರಿಸದೇ ಇರಲು ಉಸಿರಾಟದ ತೊಂದರೆ ಮತ್ತು ಅನಾನುಕೂಲತೆಗಳೇ ಪ್ರಮುಖ ಕಾರಣ ಎಂದು ಅದು ಗುರುತಿಸಿದೆ.
ಸದ್ಯ ದೇಶದಲ್ಲಿ ಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಇದು ಜನರ ಮಾಸ್ಕ್ ಧರಿಸುವ ಪ್ರವೃತ್ತಿಯನ್ನೂ ಕಡಿಮೆ ಮಾಡುತ್ತಿದೆ. ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವಲ್ಲಿ ದೈಹಿಕ ಅಂತರ ಮತ್ತು ಶುಚಿತ್ವ ಎಷ್ಟು ಮುಖ್ಯವೋ ಮಾಸ್ಕ್ ಧರಿಸುವುದೂ ಅಷ್ಟೇ ಮುಖ್ಯವಾಗಿದೆ.
ಮಾಸ್ಕ್ ಧರಿಸದಿರುವುದಕ್ಕೆ ಅಧ್ಯಯನ ಗೊತ್ತಾದ ಕಾರಣಗಳಿವು
–ಉಸಿರಾಟದ ತೊಂದರೆಯು (50%) ಪ್ರಮುಖ ಕಾರಣವಾಗಿ ಹೊರಹೊಮ್ಮಿದೆ.
–ಶೇ. 44 ಮಂದಿ ಮಾಸ್ಕ್ ಧರಿಸುವುದು ಅನಾನುಕೂಲ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.
–ದೈಹಿಕ ಅಂತರ ಪಾಲಿಸುವಾಗ ಮಾಸ್ಕ್‌ನ ಅಗತ್ಯವಿಲ್ಲ ಎಂದು ಶೇ.45 ಮಂದಿ ಊಹೆ ಹೊಂದಿದ್ದಾರೆ.
–ಮಾಸ್ಕ್ ಧರಿಸುವಿಕೆಯು ಕೋವಿಡ್ ಹರಡುವುದನ್ನು ನಿಯಂತ್ರಿಸುತ್ತದೆ ಎಂಬುದರಲ್ಲಿ ಶೇ. 44 ಮಂದಿಗೆ ನಂಬಿಕೆಯೇ ಇಲ್ಲ.
ಯುವಕರಲ್ಲಿ ಯಾವ ಭಾವನೆಗಳಿವೆ?
ಕೊರೊನಾ ವೈರಸ್ ತಡೆಗಟ್ಟಲು ದೈಹಿಕ ಅಂತರ ಮಾತ್ರ ಸಾಕಾಗುತ್ತದೆ ಎಂದು 26-35 ವರ್ಷ ವಯಸ್ಸಿನ ಯುವಕರು ಹೇಳಿರುವುದು ಸಮೀಕ್ಷೆಯಿಂದ ಬಯಲಾಗಿದೆ. ಅಲ್ಲದೆ, ತಾವು ಸೋಂಕಿಗೆ ಒಳಗಾಗುವುದರ ಬಗ್ಗೆ ಅವರಲ್ಲಿ ಅಸಡ್ಡೆ ಇದೆ. ಮಾಸ್ಕ್ ವೈರಸ್ ಅನ್ನು ತಡೆಯುತ್ತದೆ ಎಂಬುದರಲ್ಲಿ ಅವರಿಗೆ ನಂಬಿಕೆ ಇರಲಿಲ್ಲ ಎಂದು ಗೊತ್ತಾಗಿದೆ.
36-55 ವರ್ಷ ವಯಸ್ಸಿನವರಲ್ಲಿ ಮಾಸ್ಕ್ ಧರಿಸದಿರುವ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ. ದಿನಸಿ ಅಥವಾ ಹೋಂ ಡೆಲಿವರಿಗೆಯನ್ನು ತೆಗೆದುಕೊಳ್ಳುವಾಗ ಮಾತ್ರ ಮಾಸ್ಕ್ ಧರಿಸುವುದಾಗಿ ಈ ವಯೋಮಾನದ ಶೇ. 28 ಮಂದಿ ಹೇಳಿಕೊಂಡಿದ್ದಾರೆ. ಯಾರಾದರೂ ಹತ್ತಿರದಲ್ಲಿದ್ದಾಗ ಮಾತ್ರ ಮಾಸ್ಕ್ ಧರಿಸುವುದಾಗಿ ಶೇ.30 ಮಂದಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಮಹಿಳೆಯರಲ್ಲೇ ಹೆಚ್ಚು ಜಾಗೃತಿ
ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುತ್ತಿರುವವರಲ್ಲಿಯೂ ಶೇ. 73ರಷ್ಟು ಮಂದಿ ಮಾತ್ರ ಬಾಯಿ ಮತ್ತು ಮೂಗು ಎರಡನ್ನೂ ಮುಚ್ಚಿಕೊಳ್ಳುವಂತೆ ಅದನ್ನು ಧರಿಸುತ್ತಿರುವುದಾಗಿ ಖಚಿತಪಡಿಸಿದ್ದಾರೆ. ಮಾಸ್ಕ್ ಧರಿಸುವ ಕುರಿತು ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ಜಾಗೃತವಾಗಿರುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಶೀಲ್ಡ್ ಬಳಸುತ್ತಿರುವುದು ಶೇ. 21 ಮಂದಿ ಮಾತ್ರ
ಮಾಸ್ಕ್ ಧರಿಸುವವರಲ್ಲಿ ಹೆಚ್ಚು ಮಂದಿ ಎನ್95, ಬಟ್ಟೆ ಮಾಸ್ಕ್, ಸರ್ಜಿಕಲ್ ಮಾಸ್ಕ್ ಬಳಸುತ್ತಿದ್ದಾರೆ. ಮಾಸ್ಕ್ ಧರಿಸುತ್ತಿರುವವರಲ್ಲಿಯೂ ಫೇಸ್ ಶೀಲ್ಡ್ ಬಳಸುತ್ತಿರುವವ ಪ್ರಮಾಣ ಶೇ. 21 ಮಾತ್ರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.